INTERNATIONALLatestNewsWorld

ಹಮಾಸ್- ಇಸ್ರೇಲ್ ಸಂಘರ್ಷ: ಕದನ ವಿರಾಮ ಘೋಷಿಸಿದ ಇಸ್ರೇಲ್

ಗಾಜಾಪಟ್ಟಿ: ಳೆದ 47 ದಿನಗಳಿಂದ ಹಮಾಸ್‌ ಉಗ್ರರನ್ನು ಗುರಿಯಾಗಿಸಿ ಗಾಜಾ ಪಟ್ಟಿಯಲ್ಲಿ ನಡೆಸುತ್ತ ಬಂದಿರುವ ಸಮರಕ್ಕೆ ತಾತ್ಕಾಲಿಕ ವಿರಾಮ ನೀಡಲು ಇಸ್ರೇಲ್‌ ಬುಧವಾರ ತನ್ನ ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಸಂಧಾನ ಪ್ರಕ್ರಿಯೆಗೆ ಒಂದು ಹಂತದ ಯಶ ಲಭಿಸಿದಂತಾಗಿದೆ. ಹಮಾಸ್‌ ಉಗ್ರರು ತನ್ನ ಮೇಲೆ ನಡೆಸಿದ ಮಾರಕ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಸೇನೆ ಗಾಜಾಪಟ್ಟಿಯಲ್ಲಿ ನಿರಂತರವಾಗಿ ನಡೆಸುತ್ತಿರುವ ಪ್ರತಿ ದಾಳಿಗಳಿಗೆ ಉಗ್ರರ ಸಹಿತ ಅಲ್ಲಿನ ಸಹಸ್ರಾರು ಅಮಾಯಕ ನಾಗರಿಕರು ಸಾವನ್ನ ಪ್ಪಿದ್ದು ಗಾಜಾಪಟ್ಟಿಯಲ್ಲಿ ನರಕ ಸದೃಶ ಸನ್ನಿವೇಶ ಸೃಷ್ಟಿಯಾಗಿದೆ.

ಈ ಹಿನ್ನೆಲೆಯಲ್ಲಿ ಕದನ ವಿರಾಮ ಘೋಷಿಸುವಂತೆ ಇಸ್ರೇಲ್‌ ಮೇಲೆ ಅಂತಾರಾಷ್ಟ್ರೀಯ ಸಮುದಾಯದಿಂದ ಪ್ರಬಲ ಒತ್ತಡ ಹೇರಲಾಗಿತ್ತು. ಆದರೆ ಹಮಾಸ್‌ ಉಗ್ರರನ್ನು ಸಂಪೂರ್ಣವಾಗಿ ಮಟ್ಟ ಹಾಕದ ವಿನಾ ಕದನ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಇಸ್ರೇಲ್‌ ಸಾರಿತ್ತು. ಇದೇ ವೇಳೆ ಹಮಾಸ್‌ ಉಗ್ರರು ಕೂಡ ಇಸ್ರೇಲ್‌ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಿರಾಕರಿಸಿತ್ತು. ಇತ್ತಂಡಗಳ ಈ ಬಿಗಿಪಟ್ಟಿನಿಂದಾಗಿ ಯುದ್ಧ ಮತ್ತಷ್ಟು ಕಾಲ ವಿಸ್ತರಿಸುವ ಮತ್ತು ಅರಬ್‌ ರಾಷ್ಟ್ರಗಳು ಕೂಡ ರಣಭೂಮಿಗೆ ಧುಮುಕುವ ಆತಂಕ ತಲೆದೋರಿತ್ತು.

ಈ ಎಲ್ಲ ಬೆಳವಣಿಗೆಗಳ ಹೊರತಾಗಿಯೂ ಕತಾರ್‌, ಹಮಾಸ್‌ ಉಗ್ರರು ಮತ್ತು ಇಸ್ರೇಲ್‌ ನಡುವೆ ಸಂಧಾನಕಾರನ ಪಾತ್ರವನ್ನು ನಿರ್ವಹಿಸಿ ಇತ್ತಂಡಗಳು ರಾಜಿ ಸೂತ್ರವೊಂದಕ್ಕೆ ಬರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಇದೇ ವೇಳೆ ಅಮೆರಿಕ ಕೂಡ ತನ್ನ ಮೇಲಿನ ಒತ್ತಡದಿಂದ ಪಾರಾಗುವ ದಿಸೆಯಲ್ಲಿ ಇಸ್ರೇಲ್‌ ಅನ್ನು ಸಮಾಧಾನಪಡಿಸುವ ಕಾರ್ಯದಲ್ಲಿ ನಿರತವಾಗಿತ್ತು. ಕೊನೆಗೂ ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವೆ ಸಂಧಾನವೊಂದು ಏರ್ಪಟ್ಟಿದ್ದು ತನ್ನ ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ನಾಲ್ಕು ದಿನಗಳ ಕಾಲ ಕದನ ವಿರಾಮ ಘೋಷಿಸಲು ಇಸ್ರೇಲ್‌ ನಿರ್ಧರಿಸಿದೆ. ಇಸ್ರೇಲ್‌ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯ ಪ್ರಕಾರ ಗುರುವಾರ ಬೆಳಗ್ಗೆಯಿಂದ ನಾಲ್ಕು ದಿನಗಳ ಕದನ ವಿರಾಮ ಜಾರಿಗೆ ಬರ ಲಿದ್ದು, ಆ ಬಳಿಕ ಹಮಾಸ್‌ ಉಗ್ರರು ಮತ್ತಷ್ಟು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದಲ್ಲಿ ಕದನ ವಿರಾಮವನ್ನು ಮತ್ತಷ್ಟು ದಿನಗಳ ಕಾಲ ವಿಸ್ತರಿಸುವುದಾಗಿ ಹೇಳಿದೆ. ಈ ಕದನ ವಿರಾಮ ತಾತ್ಕಾಲಿಕವೇ ಹೊರತು ಹಮಾಸ್‌ ಉಗ್ರರ ವಿರುದ್ಧದ ಯುದ್ಧ ಅಂತ್ಯಗೊಂಡಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದೆ.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial