ಲಖನೌ: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಭರ್ಜರಿ ಪ್ರದರ್ಶನ ತೋರುವ ಮೂಲಕ ಎದುರಾಳಿ ಪಾಳಯದಲ್ಲಿ ನಡುಕ ಹುಟ್ಟಿಸಿದ್ದಾರೆ. ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತರ ವಹಿಸುತ್ತಿದ್ದಾರೆ. ಸಂಕಷ್ಟ ಸಮಯದಲ್ಲಿ ತಂಡದ ಕೈ ಹಿಡಿದಿರುವ ಶಮಿ ಆಪತ್ಬಾಂಧವ ಎಂದೇ ಕರೆಯಲ್ಪಡುತ್ತಿದ್ದಾರೆ.
ಇದೀಗ ಮೊಹಮ್ಮದ್ ಶಮಿ ಉತ್ತಮ ಪ್ರದರ್ಶನಕ್ಕೆ ಕ್ಲೀನ್ ಬೌಲ್ಡ್ ಆಗಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಂಪರ್ ಗಿಫ್ಟ್ ಘೋಷಿಸಿದ್ದು, ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯ ಶಮಿ ತವರು ಗ್ರಾಮ ಸಾಹಸ್ಪುರದಲ್ಲಿ ಯುಪಿ ಸರ್ಕಾರದ ವತಿಯಿಂದ ಮಿನಿ ಸ್ಟೇಡಿಯಂ ಹಾಗೂ ಜಿಮ್ ನಿರ್ಮಿಸಿ ಕೊಡುವುದಾಗಿ ಘೋಷಿಸಿದ್ದಾರೆ. ಇದಕ್ಕಾಗಿ ಈಗಾಗಲೇ ಜಾಗವನ್ನು ಗುರುತಿಸಲಾಗಿದೆ.
ಹಾಲಿ ವಿಶ್ವಕಪ್ ಆವೃತ್ತಿಯಲ್ಲಿ 6 ಪಂದ್ಯಗಳನ್ನು ಆಡಿರುವ ಮೊಹಮ್ಮದ್ ಶಮಿ 9.13 ಸರಾಸರಿಯಲ್ಲಿ 23 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಶಮಿ ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಇದುವರೆಗೂ 2023ರ ವಿಶ್ವಕಪ್ನಲ್ಲಿ ಶಮಿ 23 ವಿಕೆಟ್ಗಳನ್ನು ಪಡೆದುಕೊಂಡಿದ್ದು, ಒಟ್ಟಾರೆ 51 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಜಹೀರ್ ಖಾನ್ 2ನೇ ಸ್ಥಾನದಲ್ಲಿದ್ದಾರೆ.
ವಿಶೇಷ ಎಂದರೇ, ಕಿವೀಸ್ ವಿರುದ್ಧ 57 ರನ್ ನೀಡಿ 7 ವಿಕೆಟ್ ಪಡೆಯುವ ಮೂಲಕ ವಿಶ್ವಕಪ್ ಹಾಗೂ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 7 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿಕೊಂಡಿದ್ದರು.