ವಿಜಯೇಂದ್ರ ಬಗ್ಗೆ ಮಾತನಾಡಲು ಇನ್ನೂ ಕಾಲ ಬಂದಿಲ್ಲ: ಮಾಜಿ ಸಚಿವ ವಿ.ಸೋಮಣ್ಣ
ಬೆಂಗಳೂರು: ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರ ನೇಮಕ ಮಾಡಿರುವ ವಿಚಾರವಾಗಿ ಹಿರಿಯ ನಾಯಕ, ಮಾಜಿ ಸಚಿವ ವಿ. ಸೋಮಣ್ಣ ಕೊನೆಗೂ ಮೌನಮುರಿದಿದ್ದಾರೆ. ವಿಜಯೇಂದ್ರ ಬಗ್ಗೆ ಮಾತನಾಡಲು ಇನ್ನೂ ಕಾಲ ಬಂದಿಲ್ಲ. ವಿಜಯೇಂದ್ರ ವಿಚಾರಕ್ಕೆ ಕಾಲವೇ ಉತ್ತರ ಕೊಡಲಿದೆ ಎಂದು ಹೇಳಿದ್ದಾರೆ. ಆದಾಗ್ಯೂ ತಮ್ಮದೇ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಪಕ್ಷಕ್ಕೆ ನನ್ನದೂ ದುಡಿಮೆ, ಶ್ರಮ ಇದೆ. ನನಗೆ ಡಬಲ್ ಗೇಮ್ ಮಾಡೋದು ಗೊತ್ತಿಲ್ಲ. ಅಭಿಪ್ರಾಯವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಒಬ್ಬ ಕೆಲಸ ಮಾಡುವವನಿಗೆ, ಪಾಪ್ಯುಲರ್ ಆದವರಿಗೆ ಮುಜುಗರದ ಸಂಗತಿಗಳು ಎದುರಾಗುತ್ತವೆ. ನಾನು ಯಾವುದೇ ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಅವರು ಹೇಳಿದ್ದಾರೆ.
ಡಿಸೆಂಬರ್‌ನಲ್ಲಿ ತುಮಕೂರಿನಲ್ಲಿ ಸೋಮಣ್ಣ ಶಕ್ತಿ ಪ್ರದರ್ಶನ
ಡಿಸೆಂಬರ್ 6ರಂದು ಮಾಜಿ ಸಚಿವ ಸೋಮಣ್ಣ ನೇತೃತ್ವದಲ್ಲಿ ಸಿದ್ದಗಂಗಾ ಮಠದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ವಾಮೀಜಿಗಳ ಅತಿಥಿಗೃಹ ಉದ್ಘಾಟನಾ ನೆಪದಲ್ಲಿ ಸೋಮಣ್ಣ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿವರಾದ ಪರಮೇಶ್ವರ್, ಕೆಎನ್ ರಾಜಣ್ಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಲಿಂಗಾಯತ ಸಮುದಾಯದ ಪ್ರಮುಖ ಮುಖಂಡರಿಗೂ ಆಹ್ವಾನ ನೀಡಲಾಗಿದೆ