ಡಿಸೆಂಬರ್ 6ರ ಬಳಿಕ ನನ್ನ ಮನಸಿನ ಭಾವನೆ ಹೇಳುವೆ: ಮಾಜಿ ಸಚಿವ ವಿ.ಸೋಮಣ್ಣ
ಮೈಸೂರು: ʼವಿಪಕ್ಷಗಳೊಂದಿಗೆ ವಿಜಯೇಂದ್ರ ಹಾಗೂ ಅಶೋಕ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ’ ಎಂಬ ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಹೇಳಿಕೆಗೆ ಸಮ್ಮತಿ ವ್ಯಕ್ತಪಡಿಸಿದ ವಿ. ಸೋಮಣ್ಣ ಡಿ.6ರ ಬಳಿಕ ತನ್ನ ಮನಸ್ಸಿನ ಭಾವನೆ ತಿಳಿಸುವುದಾಗಿ ಹೇಳಿದರು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೋಮಣ್ಣ, “ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿಕೆಗೆ ನನ್ನ ಸಮ್ಮತಿ ಇದೆ. ಹಿಂದೆ ಕೇಂದ್ರ ಸಚಿವರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೊದಲಾದವರೆಲ್ಲ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದ ಅವರು, ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ಒಂದು ರೀತಿಯಲ್ಲಿ ಸೋಮನಹಳ್ಳಿ ಮುದುಕಿ ಕತೆಯನ್ನು ಹೋಲುತ್ತದೆ ಎಂದು ಪ್ರತಿಕ್ರಿಯಿಸಿದರು.
“ಡಿಸೆಂಬರ್ 6ರ ಬಳಿಕ ಎಲ್ಲಾ ವಿಚಾರನ್ನು ಜನರ ಮುಂದೆ ಇಡುತ್ತೇನೆ. ರಾಜಕಾರಣ ಯಾವುದೇ ಮನೆತನಕ್ಕೆ ಸಿಮೀತವಲ್ಲ. ನನಗೆ ಯಾವ ರೀತಿ ಹೊಡೆತ ಆಗಿದೆ ಎಂಬುದನ್ನು ವಿವರಿಸುತ್ತೇನೆ. ರಾಜಕಾರಣ ನಾಟಕ ಕಂಪನಿ ಅಲ್ಲ, ಒಳ ಒಪ್ಪಂದಕ್ಕೆ ಸೀಮಿತವಲ್ಲ” ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಇನ್ನು, ಮಾಜಿ ಸಚಿವ ವಿ.ಸೋಮಣ್ಣನಿಂದ ಮೈಸೂರು ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ. ಬಿಜೆಪಿಯ ಓರ್ವ ಶಾಸಕ, ಓರ್ವ ಸಂಸದ ಹಾಗೂ ಮಾಜಿ ಶಾಸಕರು ಸೇರಿದಂತೆ ಅನೇಕ ಮುಖಂಡರು ಸೋಮಣ್ಣ ಭೇಟಿಗೆ ಹಿಂದೇಟು ಹಾಕಿದ್ದಾರೆ. ಸೋಮಣ್ಣನವರ ಕಟ್ಟಾ ಬೆಂಬಲಿಗರು ಬಿಟ್ಟರೆ ಯಾರೂ ಸಹ ಸೋಮಣ್ಣ ಭೇಟಿಗೆ ಬಂದಿಲ್ಲ. ತಮ್ಮ ಆಪ್ತರ ಜೊತೆ ಹೋಟೆಲ್‍ನಲ್ಲಿ ಸೋಮಣ್ಣ ಉಪಹಾರ ಸೇವನೆ ಮಾಡಿದ್ದಾರೆ.