ಬೆಂಗಳೂರು: ಶಕ್ತಿ ಯೋಜನೆಗಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಅನುದಾನದ ಪೈಕಿ ಶೇ.71.42ರಷ್ಟು ಹಣ ಈಗಾಗಲೇ ಖರ್ಚಾಗಿದೆಯಂತೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಾಕಿ ಉಳಿದಿರುವ 5 ತಿಂಗಳಲ್ಲಿ ಹೆಚ್ಚುವರಿ ಅನುದಾನದ ಅವಶ್ಯಕತೆಯಿದೆ. ಇದಕ್ಕಾಗಿ ಸಾರಿಗೆ ಇಲಾಖೆಯು ಸರ್ಕಾರದ ಮುಂದೆ ಬೇಡಿಕೆ ಸಲ್ಲಿಸಬೇಕಾದ ಅನಿರ್ವಾಯತೆ ಎದುರಾಗಲಿದೆ.
ಶಕ್ತಿ ಯೋಜನೆಗಾಗಿ ಪ್ರಸಕ್ತ ಸಾಲಿನಲ್ಲಿ 2,800 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಈ ಪೈಕಿ ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ 2 ಸಾವಿರ ಕೋಟಿ ರೂ. ಮೊತ್ತದ ಉಚಿತ ಟಿಕೆಟ್‌ಗಳನ್ನು ವಿತರಿಸಲಾಗಿದೆ. ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ದೊಡ್ಡ ಹೊರೆ ಬೀಳುತ್ತಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ವಿಚಾರವಾಗಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿದ್ದು, ‘ಶಕ್ತಿ ಯೋಜನೆ ಇನ್ನೊಂದು ತಿಂಗಳಲ್ಲಿ ಸ್ಥಗಿತವಾಗಲಿದೆ’ ಎಂದು ಕುಟುಕಿದೆ. ‘ಯೋಜನೆಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಈಗ ಶೇ.29 ಮಾತ್ರವೇ ಬಾಕಿ ಉಳಿದಿದ್ದು, ಇನ್ನೊಂದು ತಿಂಗಳಲ್ಲಿ ಅದೂ ಖಾಲಿಯಾಗಲಿದೆ. ಗೃಹಲಕ್ಷ್ಮಿಯನ್ನು ಒಂದೇ ತಿಂಗಳಿಗೆ ನಿಲ್ಲಿಸಿ ತಾಂತ್ರಿಕ ದೋಷದ ನೆಪದೊಳಗೆ ನುಸುಳಿಕೊಂಡಿರುವ ಸಿಎಂ ಸಿದ್ದರಾಮಯ್ಯನವರು, ಸ್ಥಗಿತವಾಗುತ್ತಿರುವ ಮತ್ತೊಂದು ಗ್ಯಾರಂಟಿಗೆ ಕಾರಣ ಹುಡುಕುವುದಲ್ಲಿ ತಲ್ಲೀನವಾಗಿದ್ದಾರೆ’ ಎಂದು ಬಿಜೆಪಿ ಕುಟುಕಿದೆ.