ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಪನೌತಿ (ಅಪಶಕುನ)’ ಎಂದು ನಿಂದಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಕೇಂದ್ರ ಚುನಾವಣಾ ಆಯೋಗ ಗುರುವಾರ ನೋಟಿಸ್ ನೀಡಿದ್ದು, ಬಿಜೆಪಿ ಸಲ್ಲಿಸಿರುವ ದೂರಿಗೆ ವಿವರಣೆ ನೀಡುವಂತೆ ಕೋರಿದೆ. ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಲ್ಲದೆ, ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಬಿಜೆಪಿ, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದೆ.
ಬಿಜೆಪಿ ದೂರು ನೀಡಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ನೋಟಿಸ್ ಹೊರಡಿಸಿರುವ ಆಯೋಗ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ನಿಮ್ಮ ವಿರುದ್ಧ ಕ್ರಮ ಯಾಕೆ ಜರುಗಿಸಬಾರದು ಎಂಬುದಕ್ಕೆ ಶುಕ್ರವಾರ ಸಂಜೆ 6 ಗಂಟೆಯೊಳಗೆ ಉತ್ತರ ನೀಡುವಂತೆ ತಾಕೀತು ಮಾಡಿದೆ.
ಕಳೆದ ಮಂಗಳವಾರ ರಾಜಸ್ಥಾನದಲ್ಲಿ ಚುನಾವಣ ಪ್ರಚಾರ ನಿಮಿತ್ತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣೆಯ ಸಮಯದಲ್ಲಿ ಪ್ರಮುಖ ವಿಷಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಧಾನಿ ಮೋದಿ ಪ್ರಯತ್ನಿಸುತ್ತಿದ್ದಾರೆ. ಟಿವಿಯಲ್ಲಿ ಬಂದರೆ, ಹಿಂದು-ಮುಸ್ಲಿಂ ಎಂದು ಹೇಳುತ್ತಾರೆ. ಕೆಲವೊಮ್ಮೆ ಕ್ರಿಕೆಟ್ ಪಂದ್ಯ ನೋಡಲು ಹೋಗುತ್ತಾರೆ. ನಮ್ಮ ಹುಡುಗರು ಕ್ರಿಕೆಟ್ ಪಂದ್ಯವನ್ನು ಗೆಲ್ಲುತ್ತಿದ್ದರು ಆದರೆ, ಪನೌತಿ (ಅಪಶಕುನ) ಕಾಲಿಟ್ಟಿದ್ದರಿಂದ ಪಂದ್ಯವನ್ನು ಸೋತರು ಎಂದು ನ.19ರಂದು ನಡೆದ ವಿಶ್ವಕಪ್ ಫೈನಲ್ ಪಂದ್ಯವನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಮಾತನಾಡಿದ್ದರು.