ರಮಣಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ: ವಿ.ಸೋಮಣ್ಣ ಅವರನ್ನು ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ವಿ. ಸೋಮಣ್ಣ ಅವರ ಮುಂದಿನ ರಾಜಕೀಯ ನಡೆ ಏನು ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅವರು, ಪಕ್ಷದಲ್ಲೇ ಮುಂದುವರಿಯುತ್ತಾರಾ? ಅಥವಾ ಕಾಂಗ್ರೆಸ್‌ನತ್ತ ವಲಸೆ ಬರುತ್ತಾರಾ? ಎಂಬುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಬೆಂಗಳೂರಿನಲ್ಲಿ ನಡೆದ ರಮಣಶ್ರೀ ಶರಣ ಪ್ರಶಸ್ತಿ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ವಿ. ಸೋಮಣ್ಣ ಜೊತೆಗೆ ಕಾಣಿಸಿಕೊಂಡು ಪರಸ್ಪರ ಮೆಚ್ಚುಗೆಯ ಮಾತನ್ನಾಡಿರುವುದು ಕೂಡಾ ಈ ಕುತೂಹಲಕ್ಕೆ ಪುಷ್ಠಿ ನೀಡಿದೆ.
ವಿ. ಸೋಮಣ್ಣ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ನನ್ನ ವಿರುದ್ಧವೇ ಸ್ಪರ್ಧೆ ಮಾಡಿದ್ದರು.ಅಷ್ಟಕ್ಕೂ ಅವರು ಹೈಕಮಾಂಡ್ ಹೇಳಿದ್ದಾರೆ ಎಂದು ಸ್ಪರ್ಧಿಸಿದ್ದರು. ವೈಯಕ್ತಿಕವಾಗಿ ಸೋಮಣ್ಣ ಮೇಲೆ ಪ್ರೀತಿ ಇದೆಯೇ ಹೊರತು ದ್ವೇಷ, ಅಸೂಯೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಮೆಚ್ಚುಗೆಯ ಮಾತನ್ನಾಡಿದ್ದಾರೆ.
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಸಿದ್ದರಾಮಯ್ಯ ಕುರಿತಾಗಿ ಮೆಚ್ಚುಗೆ ಮಾತನ್ನಾಡಿರುವ ವಿ. ಸೋಮಣ್ಣ ಈ ಹಿಂದೆ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಒಳಗೊಂಡಂತೆ ನಮ್ಮದೇ ಆದ ಒಂದು ಲೋಕ ಇತ್ತು. ಆದರೆ ಅದು ಇವಾಗ ಛಿದ್ರವಾಗಿದೆ ಎನ್ನುವ ಮೂಲಕ ಜನತಾ ಪಕ್ಷದ ಒಡನಾಟವನ್ನು ನೆನಪಿಸಿಕೊಂಡರು.
ಇದೇ ಸಂದರ್ಭದಲ್ಲಿ ನಾನು ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಕಾಂಕ್ಷಿಯಲ್ಲ. ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸಮಯ ಕೂಡಿ ಬಂದಿಲ್ಲ. ರಸ್ತೆಯಲ್ಲಿ ನಡೆಯುವ ಚರ್ಚೆಗಳಿಗೆ ನಾನು ಹೊಣೆ ಅಲ್ಲ ಎಂದಿದ್ದಾರೆ.