ನಾನು ಯಾರ ಕೈಗೊಂಬೆಯೂ ಅಲ್ಲ: ಮಾಜಿ ಸಚಿವ ವಿ.ಸೋಮಣ್ಣ
ಬೆಂಗಳೂರು: ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ವಿ ಸೋಮಣ್ಣ ಅವರು ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇನ್ನು ಮುಂದೆ ನಾನು ಯಾರ ಕೈಗೊಂಬೆಯೂ ಅಲ್ಲ. ಪಕ್ಷದ ಉತ್ತಮ ಕಾರ್ಯಕರ್ತನಾಗಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಉಭಯ ಸೋಲು ನನಗೆ ಅನೇಕ ವಿಷಯಗಳನ್ನು ಕಲಿಸಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷದ ಹೈಕಮಾಂಡ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ. ನಾನು ಇನ್ನು ಮುಂದೆ ಕೈಗೊಂಬೆಯಲ್ಲ ಎಂಬುದನ್ನು ನಿಮಗೆ ಹೇಳುತ್ತೇನೆ’ ಎಂದು ಸೋಮಣ್ಣ ತಿಳಿಸಿದ್ದಾರೆ.
ಜಾತಿ, ಧರ್ಮ, ಪಂಥದ ಬಗ್ಗೆ ಯೋಚಿಸದೆ ಜನಸೇವೆ ಮಾಡುವುದಕ್ಕಾಗಿಯೇ ರಾಜಕೀಯಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
2023 ರ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಗೋವಿಂದರಾಜ ನಗರ ಕ್ಷೇತ್ರದ ಟಿಕೆಟ್ ಸಿಗಲಿಲ್ಲ. ಬದಲಾಗಿ ಅವರನ್ನು ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ವಿರುದ್ಧ ನಿಲ್ಲಿಸಲಾಯಿತು. ಚಾಮರಾಜ ನಗರದಲ್ಲಿಯೂ ಅವರಿಕೆ ಟಿಕೆಟ್ ನೀಡಲಾಯಿತು. ಆದರೆ, ಸೋಮಣ್ಣ ಇವೆರಡೂ ಕ್ಷೇತ್ರದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದರು. ಬಿಜೆಪಿಯು ಸೋಮಣ್ಣನವರನ್ನು ಹರಕೆಯ ಕುರಿಯನ್ನಾಗಿ ಮಾಡಿದೆ ಎಂಬ ಮಾತುಗಳನ್ನು ವಿರೋಧ ಪಕ್ಷದ ನಾಯಕರು ಆಡಿದ್ದಾರೆ.