ಮಂಗಳೂರು: ಕಾಂಗ್ರೆಸ್ ನಲ್ಲಿ ಆಂತರಿಕ ಕಿತ್ತಾಟ ಶುರುವಾಗಿದ್ದು, ಮೂರು ತಂಡಗಳು ಗಲಾಟೆ ಮಾಡುತ್ತಿವೆ. ಆಂತರಿಕ ಕಲಹದಿಂದಲೇ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಶನಿವಾರ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವ ಡಾ. ಪರಮೇಶ್ವರ್ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ವಿಚಾರ ಪ್ರಸ್ತಾಪಿಸಿದರು. ಸಿಎಂ ಸಿದ್ಧರಾಮಯ್ಯ ತಂಡ, ಡಿಸಿಎಂ ಡಿಕೆ ಶಿವಕುಮಾರ್ ತಂಡ ಮತ್ತು ಸಚಿವ ಸತೀಶ್ ಜಾರಕಿಹೊಳಿ ತಂಡ ಕೆಲಸ ಮಾಡುತ್ತಿದೆ. ಇದರ ಹಿನ್ನೆಲೆಯಲ್ಲಿ ನಿನ್ನೆ ಡಿನ್ನರ್ ಮೀಟಿಂಗ್ ನಡೆದಿದೆ. ಕಾಂಗ್ರೆಸ್ನ ಆಂತರಿಕ ಜಗಳದಿಂದಲೇ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಿದರು.
ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೂ ಕೇಸ್ ಹಾಕಲಾಗುತ್ತಿದೆ. ಜನಪ್ರತಿನಿಧಿಗಳ ಮೇಲೂ ಕೇಸ್ ಹಾಕಿ ಅವರ ಹಕ್ಕು ಕಸಿಯಲಾಗುತ್ತಿದೆ ಎಂದು ಆರೋಪಿಸಿದರು. ಕೋಲಾರ ಸಂಸದ ಮುನಿಸ್ವಾಮಿ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರ ಪರ ಧ್ವನಿ ಎತ್ತಿದ ಶಾಸಕರ ಮೇಲೆ ಕೇಸ್ ಹಾಕಲಾಗಿದೆ.
ಸರ್ಕಾರ ಪೊಲೀಸ್ ಇಲಾಖೆ ಬಳಸಿಕೊಂಡು ಎಫ್ಐಆರ್ ದಾಖಲಿಸಿದೆ. ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎಂದರು. ಸಾಮಾಜಿಕ ಜಾಲತಾಣದಲ್ಲಿ ಬರೆದಿರುವುದಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೇಲೆ ತಿಂಗಳ ಒಳಗೆ ಎರಡನೇ ಎಫ್ಐಆರ್ ದಾಖಲಿಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ದೇಶಭಕ್ತರ ವಿರುದ್ಧ ಕೇಸ್ಗಳು ಜಾಸ್ತಿಯಾಗುತ್ತಿವೆ. ಆದರೆ, ದೇಶ ವಿರೋಧಿಗಳ ಮೇಲೆ ಒಂದೇ ಒಂದು ಕೇಸ್ ಹಾಕಿಲ್ಲ ಎಂದು ಕಿಡಿಕಾರಿದರು.