ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ: ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ
ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯ ಅಷ್ಟೇನು ಜನಪ್ರಿಯವಲ್ಲದ ಇಬ್ಬರು ನಾಯಕರನ್ನು ಪಕ್ಷದ ಅಧ್ಯಕ್ಷರಾಗಿ ಮತ್ತು ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಿರುವುದು ಇದೀಗ ಪಕ್ಷದೊಳಗೆ ಅಸಮಧಾನ ಭುಗಿಲೇಳಲು ಕಾರಣವಾಗಿದೆ. ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಿರೋಧಿಸುವ ಗುಂಪಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈಗಾಗಲೇ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ್ ಬೆಲ್ಲದ್ ಸೇರಿದಂತೆ ಹಲವರು ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮತ್ತು ಆರ್ ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಈ ನಿರ್ಧಾರವು ಸಹಜವಾಗಿಯೇ ಬಿಜೆಪಿ ಹಿರಿಯ ನಾಯಕ ಬಿಎಲ್ ಸಂತೋಷ್ ಹಾಗೂ ಸಂತೋಷ್ ಮತ್ತು ಆರ್‌ಎಸ್‌ಎಸ್‌ಗೆ ಹತ್ತಿರವಾಗಿರುವ ಎಲ್ಲಾ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಅಶೋಕ್ ಮತ್ತು ವಿಜಯೇಂದ್ರ ಅವರನ್ನು ಪಕ್ಷದ ಉನ್ನತ ಹುದ್ದೆಗೆ ನೇಮಿಸಿರುವ ನಡೆಗೆ ಲಿಂಗಾಯತರ ಭದ್ರಕೋಟೆಯಾಗಿರುವ ಉತ್ತರ ಕರ್ನಾಟಕ ಭಾಗದ ವಿವಿಧ ವರ್ಗಗಳು ವಿರೋಧ ವ್ಯಕ್ತಪಡಿಸಿವೆ.
ಅಶೋಕ್ ಮತ್ತು ವಿಜಯೇಂದ್ರ ಅವರನ್ನು ಉನ್ನತ ಹುದ್ದೆಗೆ ನೇಮಕ ಮಾಡಿರುವುದನ್ನು ವಿರೋಧಿಸಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಶುಕ್ರವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಬಹಿಷ್ಕರಿಸಿದರು. ಪಕ್ಷದ ವೀಕ್ಷಕರನ್ನು ಭೇಟಿ ಮಾಡಿದ ಅವರು, ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಸ್ವೀಕರಿಸುತ್ತೇನೆ. ಆದರೆ, ಅವರ ಮಗನನ್ನಲ್ಲ. `ನನಗಿಂತ ಚಿಕ್ಕವನಾದ ವಿಜಯೇಂದ್ರ ಅವರ ಬಳಿ ನಾನು ಹೇಗೆ ಕೆಲಸ ಮಾಡಬೇಕು. ಪಕ್ಷವು ಹಿರಿಯ ನಾಯಕರನ್ನು ಉನ್ನತ ಹುದ್ದೆಗೆ ಪರಿಗಣಿಸಬೇಕಿತ್ತು’ ಎಂದು ಹೇಳಿದ್ದಾರೆ.
ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಎಂದೇ ಕರೆಯಲ್ಪಡುವ ಯತ್ನಾಳ್ ಅವರು ಶಾಸಕಾಂಗ ಪಕ್ಷದ ಸಭೆಯಿಂದ ಹೊರಬಂದ ನಂತರ, ಬಿಜೆಪಿ ಒಂದು ಕುಟುಂಬದ ಪಕ್ಷವಾಗುವುದನ್ನು ಪಕ್ಷ ಮತ್ತು ಹಿಂದೂ ಕಾರ್ಯಕರ್ತರು ಒಪ್ಪುವುದಿಲ್ಲ. ಉತ್ತರ ಕರ್ನಾಟಕದ ಜನರು ಯಾವಾಗಲೂ ಬಿಜೆಪಿಗೆ ಬೆಂಬಲ ನೀಡಿ ಮತ ಹಾಕುತ್ತಿದ್ದರು. ಆದರೆ, ದಕ್ಷಿಣ ಕರ್ನಾಟಕದ ನಾಯಕರಿಗೆ ಪ್ರಮುಖ ಹುದ್ದೆಗಳನ್ನು ನೀಡಲಾಗುತ್ತಿದೆ’ ಎಂದು ದೂರಿದರು.
ಅಶೋಕ್ ಮತ್ತು ವಿಜಯೇಂದ್ರ ಅವರನ್ನು ಉನ್ನತ ಹುದ್ದೆಗೆ ನೇಮಿಸುವ ಮೂಲಕ ಯಡಿಯೂರಪ್ಪ ಬಣ ಪಕ್ಷದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು ಎಂದು ಬಿಜೆಪಿಯ ಹಲವು ಶಾಸಕರು ಭಾವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.