
ಬೆಂಗಳೂರು: ಸಧ್ಯ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಸ್ಥಾನಕ್ಕೆ ಹಲವರ ಹೆಸರುಗಳು ಕೇಳಿಬಂದರೂ ಆಯ್ಕೆ ಅಂತಿಮವಾಗಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗರ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಈ ಸಮುದಾಯದವರ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿವೆ. ಆದರೆ ಒಕ್ಕಲಿಗರ ಮತ ಸೆಳೆತಲು ಹೋಗಿ ಲಿಂಗಾಯತರ ಮತಗಳನ್ನು ಬಿಜೆಪಿ ತಪ್ಪಿಸಿಕೊಳ್ಳಲಿದೆ ಎಂಬ ಮಾತುಗಳು ಕೇಳಿಬರುತ್ತಲಿವೆ.
ರಾಜ್ಯದ ಲಿಂಗಾಯತ ಸಮುದಾಯದ ಹಿರಿಯ ನಾಯಕ ವಿ.ಸೋಮಣ್ಣ ಅವರನ್ನು ಕಡೆಗಣನೆ ಮಾಡಿದ್ದು ಬಿಜೆಪಿಗೆ ಅನಾನುಕೂಲಕರವಾಗಿ ಪರಿಣಮಿಸಲಿದೆ ಎನ್ನಲಾಗುತ್ತಿದೆ. ರಾಜ್ಯದ ಉಪಚುನಾವಣೆಗಳ ಚಾಣಕ್ಯ ಎಂತಲೇ ಖ್ಯಾತರಾದ ವಿ.ಸೋಮಣ್ಣ ವರಿಷ್ಠರ ಮಾತಿನಿಂದ ಬೇರೆಡೆ ಸ್ಪರ್ಧಿಸಿದ್ದೂ ಅಲ್ಲದೇ ಕೆಲವೇ ಮತಗಳಿಂದ ಪರಾಭವಗೊಂಡರು. ಇದಕ್ಕೆ ಒಳ ಒಪ್ಪಂದ ಕಾರಣ ಎಂಬ ಗುಸುಗುಸು ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಆದರೆ ಸೋಲಿನ ಬಳಿಕ ಹಿರಿಯ ನಾಯಕನಿಗೆ ಪಕ್ಷ ಉನ್ನತ ಸ್ಥಾನಮಾನ ನೀಡಬಹುದು ಎಂಬ ನಿರೀಕ್ಷೆ ಎಲ್ಲರಲ್ಲಿದೆ. ಅದರಲ್ಲೂ ಪಕ್ಷ ನೀಡಿದ ಎಂಥ ಜವಾಬ್ದಾರಿಯನ್ನು ಸಹ ವಿ.ಸೋಮಣ್ಣ ಯಶಸ್ವಿಯಾಗಿ ನಿಭಾಯಿಸಿದ್ದರಿಂದ ಇವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವುದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಅನುಕೂಲ ಎನ್ನಲಾಗುತ್ತಿದೆ.
ಕಾಯಕವೇ ಕೈಲಾಸ.. ಇದು ವಿ. ಸೋಮಣ್ಣ ಅವರು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿರುವ ಧ್ಯೇಯ ಮತ್ತು ಸಿದ್ಧಾಂತ. ವಸತಿ ಸಚಿವರಾಗಿ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿಕೊಂಡು ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುವ ಪಕ್ಷದ ಶಿಸ್ತಿನ ಕಾರ್ಯಕರ್ತ ವಿ. ಸೋಮಣ್ಣ. ಹೌದು..! ವಿ.ಸೋಮಣ್ಣ ರಾಜ್ಯ ಬಿಜೆಪಿಯ ವಾಮನ ಮೂರ್ತಿ. ಅಬ್ಬರ, ಆರ್ಭಟ ವಿಲ್ಲದೇ ಕೆಲಸ ಮಾಡಿಮುಗಿಸಬಲ್ಲ ಚಾಣಕ್ಯ ರಾಜಕಾರಣಿ. ಮಾತುಗಳು ಸಾಧನೆಯಾಗಬಾರದು ಸಾಧನೆಗಳೇ ಮಾತನಾಡಬೇಕು ಎಂಬಂತೆ ವಿ.ಸೋಮಣ್ಣ ಕೆಲಸ ಮಾಡಿದವರು. ಇದಕ್ಕೆ ಸ್ಪಷ್ಟ ನಿದರ್ಶನ ರಾಜ್ಯದಲ್ಲಿ ನಡೆದ ಉಪಚುನಾವಣೆಗಳ ಫಲಿತಾಂಶ.
ಸಂಘಟನೆ, ಚಾಣಕ್ಷತನ ಅಂದ್ರೆ ವಿ.ಸೋಮಣ್ಣ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಕಾರ್ಯಕರ್ತರ ಮನವೋಲಿಸಿಕೊಂಡು, ಅವರ ವಿಶ್ವಾಸ ಪಡೆದುಕೊಂಡು ಪಕ್ಷವನ್ನು, ಅಭ್ಯರ್ಥಿಗಳನ್ನು ಹೇಗೆ ಗೆಲ್ಲಿಸಬೇಕು ಎಂಬ ತಂತ್ರಗಾರಿಕೆಗೆ ವಿ. ಸೋಮಣ್ಣ ಅವರಿಗೆ ಚೆನ್ನಾಗಿ ಗೊತ್ತಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಪಕ್ಷದ ವರಿಷ್ಠರು ವಿ.ಸೋಮಣ್ಣ ಅವರಿಗೆ ಪಕ್ಷದ ಉನ್ನತ ಸ್ಥಾನಮಾನ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.