ನವದೆಹಲಿ: ನೂತನ ಸಂಸತ್ ಭವನದಲ್ಲಿ ಸರ್ಕಾರವು ಮೊದಲ ಮಸೂದೆಯನ್ನ ಲೋಕಸಭೆಯ ಕಲಾಪಗಳಲ್ಲಿ ಪರಿಚಯಿಸಿತು. ಮೊದಲ ಮಸೂದೆ ಮಹಿಳಾ ಮೀಸಲಾತಿಗೆ ಸಂಬಂಧಿಸಿದ್ದು, ಇದಕ್ಕೆ ‘ನಾರಿ ಶಕ್ತಿ ವಂದನಾ ಕಾಯ್ದೆ’ ಎಂದು ಹೆಸರಿಡಲಾಗಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು.
ಈ ಮಸೂದೆಯಡಿ 181 ಲೋಕಸಭಾ ಸ್ಥಾನಗಳನ್ನ ಮಹಿಳೆಯರಿಗೆ ಮೀಸಲಿಡಲಾಗುವುದು. ವಿಧಾನಸಭೆಯ ಶೇ.33ರಷ್ಟು ಸ್ಥಾನಗಳನ್ನ ಮಹಿಳೆಯರಿಗೆ ಮೀಸಲಿಡಲಾಗಿದೆ. ದೆಹಲಿ ವಿಧಾನಸಭೆಯಲ್ಲಿ ಶೇಕಡಾ 33ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ 84 ಸ್ಥಾನಗಳಲ್ಲಿ ಶೇ.33ರಷ್ಟು ಮಹಿಳೆಯರಿಗೆ ಮತ್ತು ಶೇ.33ರಷ್ಟು ಸ್ಥಾನಗಳನ್ನ ಪರಿಶಿಷ್ಟ ಪಂಗಡಗಳಿಗೆ ಮೀಸಲಿಡಲಾಗಿದೆ.
ಈ ಮಸೂದೆ ಮಂಡನೆ ಇದೇ ಮೊದಲಲ್ಲಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುತ್ತಿರುವುದು ಇದೇ ಮೊದಲಲ್ಲ. 1996ರಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಸ್ಥಾನಗಳನ್ನು ಮೀಸಲಿಡಲು ಸಂವಿಧಾನವನ್ನು ತಿದ್ದುಪಡಿ ಮಾಡಲು ಲೋಕಸಭೆಯಲ್ಲಿ ಪರಿಚಯಿಸಲಾಯಿತು. ದೇವೇಗೌಡರ ನೇತೃತ್ವದ ಸಂಯುಕ್ತ ರಂಗ ಸರ್ಕಾರ ಈ ಮಸೂದೆಯನ್ನು ಮಂಡಿಸಿತ್ತು.ಮಸೂದೆಯು ಸಂವಿಧಾನದ 330 ಮತ್ತು 332ನೇ ವಿಧಿಗಳಿಗೆ ತಿದ್ದುಪಡಿ ತರಲು ಪ್ರಸ್ತಾಪಿಸಿತ್ತು.
ಲೋಕಸಭೆಯ 543 ಸ್ಥಾನಗಳಲ್ಲಿ 181 ಮತ್ತು ರಾಜ್ಯ ವಿಧಾನಸಭೆಗಳಲ್ಲಿ 4,109 ಸ್ಥಾನಗಳಲ್ಲಿ 1,370 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು ಅದು ಪ್ರಯತ್ನಿಸಿತು. ಹಂಚಿಕೆಯಾದ ಸ್ಥಾನಗಳನ್ನು ಸರದಿಯ ಮೂಲಕ ನಿರ್ಧರಿಸಲಾಗುತ್ತದೆ. ಪ್ರತಿ ಚುನಾವಣೆಯಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗಾಗಿ ಕಾಯ್ದಿರಿಸಲಾಗುತ್ತದೆ.