
ಉತ್ತರಕಾಶಿ: ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರು, 17 ದಿನ ತಾವು ಆ ವಾತಾವರಣದಲ್ಲಿ ಕಾಲ ಕಳೆದಿದ್ದು ಹೇಗೆ ಎಂಬುದರ ಕುತೂಹಲಕಾರಿ ವಿಷಯಗಳನ್ನು ಹೊರಗೆಡವಿದ್ದಾರೆ. ‘ಸುರಂಗದಲ್ಲಿ ಸಿಲುಕಿದ್ದ ಬಹುತೇಕರಿಗೆ ಬದುಕುವ ಆಸೆಯೇ ಕಮರಿ ಹೋಗಿತ್ತು’ ಎಂದು ಆ ಕಾರ್ಮಿಕರ ಪೈಕಿ ಒಬ್ಬರಾದ ಅನಿಲ್ ಬೇಡಿಯಾ ಹೇಳಿದ್ದಾರೆ.
ದುರಂತದ ಆರಂಭದ ದಿನಗಳಲ್ಲಿ ಚುರುಮುರಿ ತಿಂದು ಹಾಗೂ ಬಂಡೆಗಳಿಂದ ಜಿನುಗುತ್ತಿದ್ದ ನೀರನ್ನು ಚೀಪಿ ದಿನ ತಳ್ಳಿದೆವು. ನಂತರ ಸರ್ಕಾರದಿಂದ ಎಲ್ಲ ಸೌಲಭ್ಯಗಳು ಬರತೊಡಗಿದವು’ ಎಂದು ಕಾರ್ಮಿಕರು ಎದುರಿಸಿದ್ದ ಕರಾಳ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾನೆ.
‘ಯೋಗ ಮತ್ತು ಬೆಳಗಿನ ನಡಿಗೆಯ ಮೂಲಕ ಕಾರ್ಮಿಕರು ಧೃತಿಗೆಡದೆ ಚೈತನ್ಯವನ್ನು ಉಳಿಸಿಕೊಂಡಿದ್ದರು’ ಎಂದು ರಕ್ಷಣೆಗೊಂಡ ಕೆಲವೇ ಸಮಯದಲ್ಲಿ ದೂರವಾಣಿ ಮೂಲಕ ತನ್ನನ್ನು ಸಂಪರ್ಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾರ್ಮಿಕ ಸಬಾ ಅಹಮದ್ ವಿವರಿಸಿದ್ದಾನೆ. ಶ್ರಮಜೀವಿಗಳ ಮನೋಸ್ಥೈರ್ಯಕ್ಕೆ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ. ‘ನಾವು ಯಾವತ್ತೂ ಬದುಕುವ ಆಸೆಯನ್ನು ಕಳೆದುಕೊಳ್ಳಲಿಲ್ಲ’ ಎಂದು ಇನ್ನೊಬ್ಬ ಕಾರ್ಮಿಕ ವಿಶಾಲ್ ಹೇಳಿದ್ದಾರೆ. 108 ಗಂಟೆಗಳ ಸತತ ಕಾರ್ಯಾಚರಣೆಯ ಫಲವಾಗಿ ಕಾತರದಿಂದ ಕಾಯುತ್ತಿದ್ದ ಕ್ಷಣ ಕಳೆದ ಮಂಗಳವಾರ ಸಂಜೆ ಮೂರ್ತರೂಪಕ್ಕೆ ಬಂದು ಎಲ್ಲ 41 ಶ್ರಮಜೀವಿಗಳು ಸುರಂಗದಿಂದ ಹೊರಬಂದು ಕುಟುಂಬ ಸದಸ್ಯರು ಮಾತ್ರವಲ್ಲದೆ ಇಡೀ ದೇಶ ನಿಟ್ಟುಸಿರು ಬಿಟ್ಟಿತ್ತು.
ತಲಾ 1 ಲಕ್ಷ ರೂ. ವಿತರಣೆ
ಚಿನ್ಯಾಲಿಸೂರ್ನ ಆಸ್ಪತ್ರೆಗೆ ಧಾವಿಸಿದ ಸಿಎಂ ಪುಷ್ಕರ್ ಸಿಂಗ್ ಧಾಮಿ ಕಾರ್ಮಿಕರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಲ್ಲದೆ ಪ್ರತಿಯೊಬ್ಬರಿಗೆ ತಲಾ 1 ಲಕ್ಷ ರೂ. ಚೆಕ್ ವಿತರಿಸಿದರು. ಆಸ್ಪತ್ರೆ ಬಳಿ ಇದ್ದ ಕಾರ್ಮಿಕರ ಕುಟುಂಬ ಸದಸ್ಯರನ್ನು ಧಾಮಿ ಸಂತೈಸಿದರು. ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರನ್ನು ರಸಿದ್ದಕ್ಕಾಗಿ ಕುಟುಂಬಸ್ಥರು ಸಿಎಂಗೆ ಧನ್ಯವಾದ ಅರ್ಪಿಸಿದರು.