ನವದೆಹಲಿ- ಪ್ರಧಾನಿ ನರೇಂದ್ರ ಮೋದಿಯವರು ಸೆ.17ರ ಭಾನುವಾರದ ಇಂದು 73ನೇ ವಸಂತಕ್ಕೆ ಕಾಲಿಡಲಿದ್ದಾರೆ. ಪ್ರಧಾನಿ ಮೋದಿ ಜನ್ಮದಿನದ ಹಿನ್ನಲೆಯಲ್ಲಿ ಬಿಜೆಪಿಯು ರಾಷ್ಟ್ರಾದ್ಯಂತ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರ ಗಾಂಧಿ ಜಯಂತಿವರೆಗೆ ಸೇವಾ ಪಾಕ್ಷಿಕ ಅಭಿಯಾನವನ್ನು ಹಮ್ಮಿಕೊಂಡಿದೆ.
ಇದರ ಭಾಗವಾಗಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿರುವ ಬಿಜೆಪಿ, ಬಡವರು, ರೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ನೆರವಾಗುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯ ದ್ವಾರಕಾದಲ್ಲಿ ನಿರ್ಮಿಸಲಾಗಿರುವ ಯಶೋಭೂಮಿ ಎಂಬ ಹೆಸರಿನ ಇಂಡಿಯಾ ಇಂಟರ್ ನ್ಯಾಷನಲ್ ಕನ್ವೆನ್ಷನ್ ಹಾಲ್ ಮತ್ತು ಎಕ್ ಪೋ ಸೆಂಟರ್ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ.
ಇದಲ್ಲದೇ ದ್ವಾರಕಾದ ಸೆಕ್ಟರ್ 21 ರಿಂದ ಸೆ.25ರವರೆಗಿನ ಹೊಸ ಮೆಟ್ರೋ ನಿಲ್ದಾಣದವರೆಗೆ ದೆಹಲಿ ವಿಮಾನ ನಿಲ್ದಾಣ ಮೆಟ್ರೋ ಎಕ್ಸ್ ಪ್ರೆಸ್ ಮಾರ್ಗದ ವಿಸ್ತರಣೆಯನ್ನು ಉದ್ಘಾಟನೆ ಮಾಡಲಿದ್ದಾರೆ.
ತಮ್ಮ ಹುಟ್ಟುಹಬ್ಬ ಮತ್ತು ವಿಶ್ವಕರ್ಮ ಜಯಂತಿಯ ಇಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೂ ಚಾಲನೆ ನೀಡಲಿದ್ದಾರೆ. ಇದು 13,000 ಕೋಟಿ ರೂ.ಗಳ ಬೃಹತ್ ಯೋಜನೆಯಾಗಿದ್ದು, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿ ಇದನ್ನು ಘೋಷಿಸಿದ್ದರು. ಇದರ ಅಡಿಯಲ್ಲಿ ಸಾಂಪ್ರದಾಯಕ ಕುಶಲಕರ್ಮಿಗಳಿಗೆ ತರಬೇತಿ ಮತ್ತು ಆರ್ಥಿಕ ನೆರವು ನೀಡಲಾಗುತ್ತದೆ.