ಲಖನೌ: ಉತ್ತರ ಪ್ರದೇಶದ ಸಂಶೋಧಕಿ ನಜ್ಮಾ ಪರ್ವೀನ್ ಪ್ರಧಾನಿ ಮೋದಿ ಕುರಿತು ಪಿಎಚ್‌ಡಿ ಮಾಡಿದ್ದಾರೆ. ಈ ಮೂಲಕ ಮೋದಿ ಕುರಿತ ಪಿಎಚ್‌ಡಿ ಅಧ್ಯಯನ ಮಾಡಿದ ಮೊದಲ ಮುಸ್ಲಿಂ ಮಹಿಳೆ ಇವರೇ ಎಂದು ಹೇಳಲಾಗಿದೆ. ಪ್ರಧಾನಿ ಮೋದಿಯ ಸ್ವಕ್ಷೇತ್ರ ವಾರಾಣಸಿಯವರೇ ಆದ ಈ ಮಹಿಳೆ ಮೋದಿಯ ರಾಜಕೀಯ ಜೀವನದ ಕುರಿತು ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ.
ಉತ್ತರ ಪ್ರದೇಶದ ವಾರಾಣಸಿಯ ಲಲ್ಲಾಪುರದ ನಿವಾಸಿಯಾಗಿರುವ ಸಂಶೋಧಕಿ ನಜ್ಮಾ ಪರ್ವೀನ್ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ರಾಜ್ಯಶಾಸ್ತ್ರ ವಿಭಾಗದಿಂದ ‘ನರೇಂದ್ರ ಮೋದಿ ಅವರ ರಾಜಕೀಯ ನಾಯಕತ್ವ: ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ಎಂಬ ಶೀರ್ಷಿಕೆಯಡಿಯಲ್ಲಿ ಭಾರತದ ಪ್ರಧಾನಿ ಕುರಿತು ತಮ್ಮ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ.
ಈ ಮೂಲಕ ಪ್ರಧಾನಿ ಮೋದಿಯವರ ಬಗ್ಗೆ ಸಂಶೋಧನೆ ನಡೆಸಿದ ದೇಶದ ಮೊದಲ ಮುಸ್ಲಿಂ ಮಹಿಳೆ ಎನಿಸಿಕೊಂಡಿದ್ದಾರೆ ನಜ್ಮಾ ಪರ್ವೀನ್. ಇದರಲ್ಲಿ ಅವರು ಪ್ರಧಾನಿ ಮೋದಿಯನ್ನು ರಾಜಕೀಯದ ‘ಮೆಗಾಸ್ಟಾರ್’ ಎಂದು ಬಣ್ಣಿಸಿದ್ದಾರೆ. ಪರ್ವೀನ್ 2014 ರಲ್ಲಿ ಸಂಶೋಧನೆಗೆ ಸೇರಿಕೊಂಡರು ಮತ್ತು BHU ನ ಪ್ರೊಫೆಸರ್ ಸಂಜಯ್ ಶ್ರೀವಾಸ್ತವ ಅವರ ಮೇಲ್ವಿಚಾರಣೆಯಲ್ಲಿ 8 ವರ್ಷಗಳಲ್ಲಿ ತನ್ನ ಪ್ರಾಜೆಕ್ಟ್ ಪೂರ್ಣಗೊಳಿಸಿದರು. ಆದರೆ ಅವರ ಪ್ರಬಂಧದ ಬಾಹ್ಯ ಪರೀಕ್ಷಕರು ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಬಂದಿದ್ದರು.
ಆರಂಭದಲ್ಲಿ ಕೆಲವರು ತನ್ನ ನಿರ್ಧಾರವನ್ನು ವಿರೋಧಿಸಿದರು. ಆದರೆ ನಾನು ನನ್ನ ಆಲೋಚನೆಯಲ್ಲಿ ದೃಢವಾಗಿದ್ದೆ, ಹಾಗೂ ಸಂಶೋಧನೆಗೆ ಮುಂದಾದೆ ಎಂದೂ ಪರ್ವೀನ್ ಹೇಳಿದರು. ಅಲ್ಲದೆ, ಮೋದಿಯವರಂತೆ ರಾಜಕಾರಣಿಯಾಗುವ ಕನಸು ಹೊತ್ತಿರುವ ಪರ್ವೀನ್, ತಾನು ಈಗಾಗಲೇ ಅಧ್ಯಕ್ಷೆಯಾಗಿರುವ ಭಾರತೀಯ ಅವಾಮ್ ಪಕ್ಷ ಎಂಬ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದೇನೆ ಎಂದೂ ಹೇಳಿದ್ದಾರೆ.
ಮೋದಿ ಕುರಿತ ಪ್ರಬಂಧವನ್ನು ಐದು ಅಧ್ಯಾಯಗಳಾಗಿ ವಿಂಗಡಿಸಲಾಗಿದೆ ಮತ್ತು ಪರ್ವೀನ್ ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಲು 20 ಹಿಂದಿ ಪುಸ್ತಕಗಳು ಮತ್ತು ಪಿಎಂ ಮೋದಿ ಅವರ ಜೀವನಚರಿತ್ರೆ ಸೇರಿದಂತೆ 79 ಇಂಗ್ಲಿಷ್ ಪುಸ್ತಕಗಳನ್ನು ಉಲ್ಲೇಖಿಸಿದ್ದಾಗಿ ಹೇಳುತ್ತಾರೆ. ಅಲ್ಲದೆ, ಅವರು 37 ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಉಲ್ಲೇಖಿಸಿದ್ದಾರೆ ಮತ್ತು ಈ ಸಮಯದಲ್ಲಿ ಪ್ರಧಾನಿ ಮೋದಿಯವರ ಸಹೋದರ ಪಂಕಜ್ ಮತ್ತು ಆರ್‌ಎಸ್‌ಎಸ್ ನಾಯಕ ಇಂದ್ರೇಶ್ ಕುಮಾರ್ ಅವರನ್ನು ಭೇಟಿಯಾದರು. ತ್ರಿವಳಿ ತಲಾಖ್ ವಿರುದ್ಧದ ಆಂದೋಲನ, ಕಾಶಿಯಿಂದ ಮುಸ್ಲಿಂ ಮಹಿಳೆಯರು ಪ್ರಧಾನಿ ಮೋದಿಗೆ ರಾಖಿಗಳನ್ನು ಕಳುಹಿಸುವುದು ಮತ್ತು ಮೋದಿಗೆ ಭಾರತೀಯ ಅವಾಮ್ ಪಕ್ಷದ ಬೆಂಬಲವನ್ನು ಸಂಶೋಧನೆಯಲ್ಲಿ ಪ್ರಮುಖವಾಗಿ ಸೇರಿಸಲಾಗಿದೆ ಎಂದು ಪರ್ವೀನ್ ಹೇಳಿದರು.