ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವಧಿ ಅಂತ್ಯಗೊಂಡಿದೆ. ಹಲವರ ಹೆಸರು ಕೇಳಿಬರುತ್ತಿರುವ ನಡುವೆ ಬಿಸಿಸಿಐ, ರಾಹುಲ್ ದ್ರಾವಿಡ್ ಹಾಗೂ ಇತರ ಸಿಬ್ಬಂದಿಗಳ ಮುಂದುವರಿಸುವುದಾಗಿ ಘೋಷಿಸಿತ್ತು. ಈ ಘೋಷಣೆ ಹೊರಬಿದ್ದ ಬೆನ್ನಲ್ಲೇ ಇತ್ತ ರಾಹುಲ್ ದ್ರಾವಿಡ್ ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಕೋಚ್ ಮುಂದುವರಿಕೆ ಕುರಿತು ನಾನು ಇನ್ನೂ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಸೌತ್ ಆಫ್ರಿಕಾ ವಿರುದ್ದದ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಕುರಿತು ಬಿಸಿಸಿಐ ಆಯ್ಕೆ ಸಮಿತಿ ಇಂದು ಸಭೆ ನಡೆಸಿತ್ತು. ಈ ಸಭೆಯಲ್ಲಿ ಪಾಲ್ಗೊಂಡ ರಾಹುಲ್ ದ್ರಾವಿಡ್ ಹಲವು ವಿಚಾರ ಚರ್ಚಿಸಿದ್ದಾರೆ. ಸಭೆ ಬಳಿಕ ಹೊರಬಂದ ರಾಹುಲ್ ದ್ರಾವಿಡ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ವೇಳೆ ಕೋಚಿಂಗ್ ಮುಂದುವರಿಕೆ ಕುರಿತು ಮಾತನಾಡಿದ ದ್ರಾವಿಡ್, ಇನ್ನೂ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಸಹಿ ಹಾಕಿದ ಬಳಿಕ ಉತ್ತರ ಸಿಗಲಿದೆ ಎಂದು ದ್ರಾವಿಡ್ ಹೇಳಿದ್ದಾರೆ. ಯಾವುದೂ ಅಧಿಕೃತವಾಗಿಲ್ಲ. ನಾನು ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ. ನನಗೆ ಒಪ್ಪಂದ ಪತ್ರ ಸಿಕ್ಕಿದ ಬಳಿಕ ಚರ್ಚೆ ನಡೆಸುತ್ತೇನೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ. ಬಿಸಿಸಿಐ ರಾಹುಲ್ ದ್ರಾವಿಡ್ ಕೋಚ್ ಆಗಿ ಮುಂದುವರಿಕೆಗೆ ಆಸಕ್ತಿ ತೋರಿದೆ. ಕಳೆದ ಹಲವು ದಿನಗಳಿಂದ ಚರ್ಚೆ ನಡೆಸಿದೆ. ಕೊನೆಗೂ ರಾಹುಲ್ ದ್ರಾವಿಡ್ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಈ ಕುರಿತು ಯಾವುದು ಅಧಿಕೃತವಾಗಿಲ್ಲ. 2024ರ ಟಿ20 ವಿಶ್ವಕಪ್ ಟೂರ್ನಿವರೆಗೆ ರಾಹುಲ್ ದ್ರಾವಿಡ್ ಕೋಚ್ ಆಗಿ ಮುಂದವರಿಸಲು ಬಿಸಿಸಿಐ ಆಸಕ್ತಿ ತೋರಿದೆ.