ಭಾರತದ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ
ಸಂವಿಧಾನ: ಬಸವರಾಜ ಬೊಮ್ಮಾಯಿ
ಬೆಂಗಳೂರು: ಭಾರತವು ಯಶಸ್ವಿ ದೇಶವಾಗಲು ಸಂವಿಧಾನವು ಯಶಸ್ವಿಯಾಗಬೇಕು ಮತ್ತು ಸಂವಿಧಾನದ ಆಶಯಗಳು ಈಡೇರಬೇಕು. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಸಂವಿಧಾನದ ಮೂಲ ಆಶಯವನ್ನೇ ಬದಲಿಸುವ ಪ್ರಯತ್ನ ನಡೆಸಲಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಸಂವಿಧಾನ ದಿನಾಚರಣೆಯ ಪ್ರಯುಕ್ತ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ‘ಸಂವಿಧಾನ ಸನ್ಮಾನ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯಾನಂತರದಲ್ಲಿ ಸಂವಿಧಾನ ರಚನೆ ಬಹು ದೊಡ್ಡ ಸವಾಲಾಗಿತ್ತು. ಆಗ ಸಂವಿಧಾನ ಸಮಿತಿಯು ಸುದೀರ್ಘ- ಎಲ್ಲ ಆಯಾಮಗಳಲ್ಲಿ ಚರ್ಚೆ ಮಾಡಿ, ಬಾಬಾಸಾಹೇಬ ಅಂಬೇಡ್ಕರರ ಮಾನವೀಯ ತತ್ವಗಳನ್ನು ಸೇರಿಸಿದ್ದರಿಂದ ನಮ್ಮ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಎನಿಸಿದೆ ಎಂದು ಅವರು ವಿಶ್ಲೇಷಣೆ ಮಾಡಿದರು.
ಹಲವಾರು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಸಾರ್ವಕಾಲಿಕವಾಗಿರುವ ಸಂವಿಧಾನ ರಚಿಸಲಾಗಿದೆ. ಇದು ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರ ದೂರದೃಷ್ಟಿಯ ಫಲ ಎಂದು ಅವರು ತಿಳಿಸಿದರು. ಬಾಬಾ ಸಾಹೇಬರ ಆಶಯದಂತೆ ನಾವಿಂದು ಭಾರತದಲ್ಲಿ ಸರ್ವ ಸ್ವತಂತ್ರ, ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಸಮಾನತೆಯ ಬದುಕನ್ನು ಕಾಣುವಂತಾಗಿದೆ ಎಂದು ತಿಳಿಸಿದರು.
ಸಂವಿಧಾನದಲ್ಲಿ ಬಿಜೆಪಿಗೆ ನಂಬಿಕೆ:
ಬಿಜೆಪಿ ಸಂವಿಧಾನದಲ್ಲಿ ಸಂಪೂರ್ಣ ನಂಬಿಕೆಯಿಟ್ಟು ಕೆಲಸ ಕಾರ್ಯಗಳನ್ನು ಮಾಡಿದೆ. ಡಾ. ಅಂಬೇಡ್ಕರ್ ಅವರು 370ನೇ ವಿಧಿ ತಾತ್ಕಾಲಿಕವಾಗಿ ಇರಬೇಕು ಎಂದಿದ್ದರು. 370ನೇ ವಿಧಿ ರದ್ದು ಮಾಡಿ ಆ ಕೆಲಸವನ್ನು ಬಿಜೆಪಿ ಮಾಡಿದೆ. ಹಿಂದುಳಿದ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನದ ಆಶಯ ಈಡೇರಿಸಿದ್ದಾರೆ ಎಂದು ವಿವರ ನೀಡಿದರು. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿದರು ಎಂದು ತಿಳಿಸಿದರು.
ಕಾಂಗ್ರೆಸ್ಸಿಗೆ ಆರಂಭದಿಂದಲೂ ಸಂವಿಧಾನ ಮಾತ್ರವಲ್ಲದೆ, ಶ್ರೇಷ್ಠ ಸಂವಿಧಾನ ಕೊಟ್ಟ ಬಾಬಾ ಸಾಹೇಬರ ಬಗ್ಗೆ ತಿರಸ್ಕಾರ ಇತ್ತು. ಕಾಂಗ್ರೆಸ್ ಆಡಳಿತದಲ್ಲಿ ಸಂವಿಧಾನದ ಮೂಲ ಆಶಯವನ್ನೇ ಬದಲಿಸುವ ಪ್ರಯತ್ನ ನಡೆದಿತ್ತು ಎಂದು ಅವರು ಆರೋಪಿಸಿದರು.
ಸಂವಿಧಾನದ ಮೂಲ ಸ್ಥೂಲ ರಚನೆಯನ್ನೇ ಬದಲಿಸಲು ಮುಂದಾದಾಗ ಅದನ್ನು ಕೇರಳದ ಕೇಶವಾನಂದ ಭಾರತೀ ಗುರುಗಳು ಸುಪ್ರೀಂ ಕೋರ್ಟಿನ ಸಂವಿಧಾನ ಪೀಠದಲ್ಲಿ ಪ್ರಶ್ನಿಸಿದ್ದರು. ಸುಪ್ರೀಂ ಕೋರ್ಟ್, ಸಂವಿಧಾನದ ಮೂಲ ರಚನೆಯನ್ನು ಬದಲಿಸಬಾರದು ಎಂದು ತಿಳಿಸಿತ್ತು ಎಂದು ಗಮನ ಸೆಳೆದರು.
ಇಂದಿರಾ ಗಾಂಧಿ ಕುರ್ಚಿ ಉಳಿಸಲು ತುರ್ತು ಪರಿಸ್ಥಿತಿ ಹೇರಿ ಸಂವಿಧಾನ ಬದಲಿಸುವ ಕಾಂಗ್ರೆಸ್ಸಿನ ಮೊದಲ ಪ್ರಯತ್ನಕ್ಕೆ ಹಿನ್ನಡೆ ಆಗಿತ್ತು. ಬಳಿಕ ಕಾಂಗ್ರೆಸ್ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿತ್ತು. ವ್ಯಕ್ತಿಯ ಸ್ವಾತಂತ್ರ್ಯ, ಸಾರ್ವಜನಿಕ ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮಗಳ ಸ್ವಾತಂತ್ರ್ಯ- ಎಲ್ಲ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಮೊಟಕುಗೊಳಿಸಿದ್ದರು. ಇಂದಿರಾ ಗಾಂಧಿಯವರ ಪ್ರಧಾನಿ ಕುರ್ಚಿ ಉಳಿಸುವ ಸಲುವಾಗಿ, ವೈಯಕ್ತಿಕ ಕಾರಣಕ್ಕಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಲಾಯಿತು ಎಂದು ಟೀಕಿಸಿದರು.
ರಾಜೀವ್ ಗಾಂಧಿಯವರು ಪ್ರಧಾನಿ ಆಗಿದ್ದಾಗ ಶಾಬಾನೊ ಕೇಸಿನಲ್ಲಿ ಹೆಣ್ಮಗಳಿಗೆ ಜೀವನೋಪಾಯ ಕೊಡುವುದನ್ನು ವಿರೋಧಿಸಿ ಸಂವಿಧಾನ ತಿದ್ದುಪಡಿ ಮಾಡಿದ್ದರು. ಸುಪ್ರೀಂ ಕೋರ್ಟಿನ ಆದೇಶ ಜಾರಿ ಆಗದಂತೆ ನೋಡಿಕೊಂಡಿದ್ದರು ಎಂದು ವಿವರ ನೀಡಿದರು.
ಕಾಂಗ್ರೆಸ್ ಪಕ್ಷವು ಸಂವಿಧಾನವನ್ನೇ ಬುಡಮೇಲು ಮಾಡಲು ಮುಂದಾಗಿದ್ದರೆ, ಸಂವಿಧಾನ ಉಳಿಸುವ ಕೆಲಸವನ್ನು ಸುಪ್ರೀಂ ಕೋರ್ಟ್ ಮಾಡಿದೆ. ಕೇಶವಾನಂದ ಭಾರತೀಯವರ ತೀರ್ಪು ಮತ್ತು ಎಸ್.ಆರ್.ಬೊಮ್ಮಾಯಿಯವರ ಒಕ್ಕೂಟ ವ್ಯವಸ್ಥೆ ಕುರಿತ ತೀರ್ಪಿನಿಂದ ಸಂವಿಧಾನದ ರಕ್ಷಣೆಯಾಗಿದೆ. ಖಾಲಿ ಪುಟಗಳ ಸಂವಿಧಾನ ಎಂಬುದು ಸಂವಿಧಾನದ ಕುರಿತ ಕಾಂಗ್ರೆಸ್ಸಿನ ಶೂನ್ಯ ನಂಬಿಕೆಯನ್ನು ತಿಳಿಸುತ್ತದೆ ಎಂದು ಅವರು ಟೀಕಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿದರು. ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ವಿಧಾನಪರಿಷತ್ತಿನ ಸದಸ್ಯರಾದ ಎನ್.ರವಿಕುಮಾರ್, ಬಿ.ಜಿ.ಪಾಟೀಲ್, ವಿಧಾನಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕ ಬಸವರಾಜ ಮತ್ತಿಮೊಡ, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು. ಮಂಜುಳಾ, ಬಿಜೆಪಿ ರಾಜ್ಯ ಕಾರ್ಯದರ್ಶಿ ಲಲಿತಾ ಆನಾಪುರ, ಮುಖಂಡ ಜಗದೀಶ್ ಹಿರೇಮನಿ, ರಾಜ್ಯ ಎಸ್‍ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.