ಬೆಂಗಳೂರು: ಭೂಮಿಗೆ ಸಮೀಪವಿರುವ ಶುಕ್ರ ಗ್ರಹದ ಬಗ್ಗೆ ಸಂಶೋಧನೆ ನಡೆಸಲು ವಿಜ್ಞಾನಿಗಳು ಸದಾ ಕಾತರರಾಗಿರುತ್ತಾರೆ. ಭೂಮಿಯ ಅವಳಿಯಂತಿರುವ ನಿಗೂಢ ಅಂಶಗಳನ್ನು ತನ್ನ ಗರ್ಭದೊಳಗೆ ಇರಿಸಿರುವ ಶುಕ್ರನ ಬಗ್ಗೆ ಇದೀಗ ವಿಜ್ಞಾನಿಗಳು ಹೊಸ ಅಂಶವೊಂದನ್ನು ಪತ್ತೆ ಮಾಡಿದ್ದಾರೆ. ವಿಜ್ಞಾನಿಗಳು ಶುಕ್ರ ಗ್ರಹದಲ್ಲಿ ಪರಮಾಣು ಆಮ್ಲಜನಕ ಇರುವುದನ್ನು ಪತ್ತೆ ಮಾಡಿದ್ದಾರೆ. ಸೋಫಿಯಾ ವಾಯುಗಾಮಿ ವೀಕ್ಷಣಾಲಯದಲ್ಲಿ ಉಪಕರಣವನ್ನು ಬಳಸಿಕೊಂಡು ಆಮ್ಲಜನಕ ಪತ್ತೆಹಚ್ಚುವಿಕೆಯನ್ನು ಮಾಡಲಾಯಿತು.
ನಾಸಾ ಮತ್ತು ಜರ್ಮನ್ ಏರೋಸ್ಪೇಸ್ ಸೆಂಟರ್ ನ ಜಂಟಿ ಆವಿಷ್ಕಾರವು ಶುಕ್ರದ ವಾತಾವರಣದ ಸಂಯೋಜನೆಯನ್ನು ಅರ್ಥಮಾಡಿಕೊಳ್ಳಲು ಹೊಸ ಮಾರ್ಗಗಳನ್ನು ತೆರೆದಿದೆ.
ಶುಕ್ರನಲ್ಲಿ ಭೂಮಿಯಲ್ಲಿ ಇರುವಂತೆ ಆಮ್ಲಜನಕದ ಪ್ರಮಾಣವಿಲ್ಲ. ಭೂಮಿಯಲ್ಲಿ ಶೇ.21ರಷ್ಟು ಆಮ್ಲಜನಕವಿದೆ. ಆದರೆ ಶುಕ್ರನ ದಟ್ಟವಾದ ಮತ್ತು ಹಾನಿಕಾರಕ ವಾತಾವರಣವು ಶೇ.96.5ರಷ್ಟು ಕಾರ್ಬನ್ ಡೈ ಆಕ್ಸೈಡ್ ನಿಂದ ತುಂಬಿ ಹೋಗಿದೆ. ಅಲ್ಲದೆ ಅಲ್ಪ ಪ್ರಮಾಣದ ನೈಟ್ರೋಜನ್ ಮತ್ತು ಇತರ ಅನಿಲಗಳಿವೆ. ಆಮ್ಲಜನಕವು ಅತ್ಯಲ್ಪ ಪ್ರಮಾಣದಲ್ಲಿದ್ದು, ಇಲ್ಲವೇ ಎನ್ನಬಹುದಾದ ಸ್ಥಿತಿಯಲ್ಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಶುಕ್ರನಲ್ಲಿ ಪತ್ತೆಯಾದ ಪರಮಾಣು ಆಮ್ಲಜನಕವು ಒಂದೇ ಆಮ್ಲಜನಕ ಪರಮಾಣುವನ್ನು ಒಳಗೊಂಡಿರುತ್ತದೆ. ಇದು ಆಣ್ವಿಕ ಆಮ್ಲಜನಕದಿಂದ (molecular oxygen) ಭಿನ್ನವಾಗಿದೆ. ಆಣ್ವಿಕ ಆಮ್ಲಜನಕವು ಎರಡು ಆಮ್ಲಜನಕ ಪರಮಾಣುಗಳನ್ನು ಒಳಗೊಂಡಿರುತ್ತದೆ.