ಹಾವೇರಿ: ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾವಿ ವಿಧಾನಸಭೆ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧ ಹಾವೇರಿ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್‌ನಿಂದ ಮೇಘಾ ಮಿಟಿಂಗ್ ನಡೆಯಿತು.
ಶಿಗ್ಗಾವಿಯಿಂದ ಹಾವೇರಿಗೆ ಶಿಫ್ಟ್ ಆಗಿರು ಅಭ್ಯರ್ಥಿ ಆಯ್ಕೆ ಮಿಟಿಂಗ್‌ನಲ್ಲಿ ಖುದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಶಿಗ್ಗಾವಿ ಉಪಚುನಾವಣೆ ಮುಖ್ಯ ಉಸ್ತುವಾರಿ ಮಯೂರ್ ಜಯಕುಮಾರ ಅವರು ಭಾಗಿಯಾಗಿ ಸಭೆ ನಡೆಸಿದರು.
ಬೆಳಿಗ್ಗೆಯಿಂದ ಸಂಜೆ 4.30 ರವರೆಗೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ನಾಯಕರು ಪ್ರತ್ಯೇಕವಾಗಿ ತಮ್ಮ ತಮ್ಮ ಕಾರ್ಯಕರ್ತರು ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.ಹೊಸ ಪ್ರವಾಸಿ ಮಂದಿರದ ಮಿಟಿಂಗ್ ಹಾಲ್ ನಲ್ಲಿ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಸಭೆ ನಡೆಸಿದರೆ, ಹಳೆ ಪ್ರವಾಸಿ ಮಂದಿರದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಯಾಸೀರ್ ಖಾನ್ ಪಠಾಣ ಸಭೆ ನಡೆಸಿದರು. ಹೊಸ ಪ್ರವಾಸಿ ಮಂದಿರದ ಕೋಣೆಯಲ್ಲಿ ಎರಡು ಬಣಗಳಿಂದ ಅಂತರ ಕಾಯ್ದುಕೊಂಡು ರೂಂನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಕಾರ್ಯಕರ್ತರೊಂದಿಗೆ ಸಮಯ ಕಳೆದರು.
ಪ್ರತಿಷ್ಟೆಯಾಗಿ ತೆಗೆದುಕೊಂಡ ಕಾಂಗ್ರೆಸ್:
ಉಪಚುನಾವಣೆಯನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಆ ಹಿನ್ನೆಲೆ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಯುತ್ತಿದ್ದು ಪಕ್ಷದ ಹೈ ಕಮಾಂಡ್ಗೆ ಬಣಗಳ ಬಡಿದಾಟ ಕಬ್ಬಿಣದ ಕಡಲೆಯಂತೆಯಾಗಿದೆ. ಕಳೆದ ತಿಂಗಳು ಜುಲೈ 5 ರಂದು ಶಿಗ್ಗಾವಿಯಲ್ಲಿ ಬಣಗಳು ಹಾಗೂ ಆಕಾಂಕ್ಷೆಗಳೊಂದಿಗೆ ಸಭೆ ನಡೆಸಿತು. ಅಂದು ಬಣಗಳ ಶಕ್ತಿ ಪ್ರದರ್ಶನ ಹೆಚ್ಚಾದ ಹಿನ್ನೆಲೆ ಅಭ್ಯರ್ಥಿ ಆಯ್ಕೆ ಸಮಿತಿಯ ಪದಾಧಿಕಾರಿಗಳು ಗೊಂದಲದಲ್ಲಿ ಕಾಲ್ಕಿತ್ತರು.ಅಂದಿನಿಂದ ಪಕ್ಷದ ವರಿಷ್ಠರನ್ನು ದುಂಬಾಲು ಬಿದಿದ್ದ ನಾಯಕರು, ಇಂದು ಮತ್ತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಚುನಾವಣೆ ಉಸ್ತುವಾರಿ ಮಯೂರ್ ಜಯಕುಮಾರ ಅವರು ಮೂಲಕ ಟಿಕೆಟ್‌ಗಾಗಿ ಲಾಭಿ ನಡೆಸಿದರು. ಸುಮಾರು 5.22 ಗಂಟೆಗೆ ಆಗಮಿಸಿದ ಜಯಕುಮಾರ ಅವರನ್ನು ಪ್ರವಾಸಿ ಮಂದಿರ ಗೇಟ್‌ನಲ್ಲಿ ಸ್ವಾಗತಿಸಿದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ತಮ್ಮ ಅಹವಾಲು ಹೇಳಿಕೊಂಡರು.
ಬಳಿಕ ಹಳೆ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಸ್ವಾಗತಿಸಿದರು. ಬಳಿಕ ಮೊದಲು ಶಾಸಕ ಶ್ರೀನಿವಾಸ ಮಾನೆ,ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ,ಆನಂದಸ್ವಾಮಿ ಗಡ್ಡದೇವರಮಠ ಅವರೊಂದಿಗೆ ಸಮಾಲೋಚನೆ ಮಾಡಿ,ಬಳಿಕ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಚುನಾವಣೆ ಸಮಿತಿಯಲ್ಲಿ ಭಾಗಿಯಾದರು.