ಚೀನಾದ ದುರ್ಬುದ್ಧಿ ಬಯಲು: ಭಾರತೀಯರ ಸೋಗಿನಲ್ಲಿ ನಡೆಯುತ್ತಿದೆ ದಾರಿ ತಪ್ಪಿಸುವ ಕೆಲಸ
ವದೆಹಲಿ: ಭಾರತದ ವಿರುದ್ಧ ಸದಾ ಒಂದಿಲ್ಲೊಂದು ಮಸಲತ್ತು ಮಾಡುವ ಚೀನಾದ ಮತ್ತೊಂದು ಅಸಲಿ ಮುಖವಾಡ ಇದೀಗ ಕಳಚಿ ಬಿದ್ದಿದೆ. ಭಾರತದ ವಿರುದ್ಧ ನಕಲಿ ಸುದ್ದಿಗಳನ್ನು ಹರಡಲು ಚೀನಾದಲ್ಲಿ ಸಾಕಷ್ಟು ನಕಲಿ ಫೇಸ್ಬುಕ್ ಖಾತೆಗಳನ್ನು ತೆರೆಯಲಾಗುತ್ತಿದೆ ಎಂದು ಮೆಟಾ ಕಂಪನಿ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಸಾರ್ವಜನಿಕ ಅಭಿಪ್ರಾಯವನ್ನು ಅತ್ಯಂತ ಕುಶಲತೆಯಿಂದ ನಿರ್ವಹಿಸಲು ಮತ್ತು ಮಾತುಗಳನ್ನು ಪ್ರಭಾವಿಸಲು ಈ ನಕಲಿ ಖಾತೆಗಳು ಬಳಸುತ್ತಿರುವ ಅತ್ಯಾಧುನಿಕ ಕಾರ್ಯತಂತ್ರಗಳ ಮೇಲೆ ಮೆಟಾ ವರದಿಯು ಬೆಳಕು ಚೆಲ್ಲುತ್ತದೆ. ತನ್ನ ತ್ರೈಮಾಸಿಕ ಬೆದರಿಕೆ ವರದಿಯಲ್ಲಿ ಅನೇಕ ಕಳವಳಕಾರಿ ಅಂಶಗಳನ್ನು ಮೆಟಾ ಉಲ್ಲೇಖಿಸಿದ್ದು, ಈ ವರ್ಷದ ಆರಂಭದಿಂದ ಬಹದೊಡ್ಡ ಮಟ್ಟದ ನಕಲಿ ಖಾತೆಗಳ ಜಾಲ ಸೃಷ್ಟಿ ಆಗಿರುವುದನ್ನು ಬಹಿರಂಗಪಡಿಸಿದೆ.
ಭಾರತೀಯರ ಸೋಗಿನಲ್ಲಿ ಈ ನಕಲಿ ಖಾತೆಗಳು ಸಕ್ರಿಯವಾಗಿದ್ದು, ಭಾರತದ ರಾಜಕೀಯ ಮತ್ತು ರಾಷ್ಟ್ರೀಯ ಭದ್ರತೆ ಕುರಿತಾದ ಇತರೆ ಸಮಸ್ಯೆಗಳ ವಿಚಾರದಲ್ಲಿ ತಪ್ಪಾದ ಮಾಹಿತಿಯನ್ನು ಹರಿಬಿಡಲಾಗುತ್ತಿದೆ. ಪತ್ರಕರ್ತರು, ವಕೀಲರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ವೇಷದಲ್ಲಿ ಕಾಲ್ಪನಿಕ ವ್ಯಕ್ತಿಗಳು ಫೇಸ್ಬುಕ್ ನಕಲಿ ಖಾತೆಗಳ ಜಾಲವನ್ನು ಆಪರೇಟ್ ಮಾಡುತ್ತಿದ್ದಾರೆ.
ಈ ಖಾತೆಗಳಲ್ಲಿ ಹೆಚ್ಚಾಗಿ ಇಂಗ್ಲಿಷ್ನಲ್ಲಿ ಪೋಸ್ಟ್ ಮಾಡಲಾಗುತ್ತಿದ್ದು, ಹಿಂದಿ ಮತ್ತು ಚೀನಾ ಭಾಷೆಯ ಬಳಕೆಯನ್ನು ಕಡಿಮೆ ಇದೆ. ಟಿಬೆಟ್ ಮತ್ತು ಅರುಣಾಚಲ ಪ್ರದೇಶದಲ್ಲಿ ಪ್ರಾದೇಶಿಕ ಸುದ್ದಿ, ಸಂಸ್ಕೃತಿ, ಕ್ರೀಡೆ ಮತ್ತು ಪ್ರಯಾಣದ ಬಗ್ಗೆ ಬರೀ ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದೇ ಈ ನಕಲಿ ಖಾತೆಗಳ ಪ್ರಧಾನ ಕೃತ್ಯವಾಗಿದೆ. ಅದರಲ್ಲೂ ಟಿಬೆಟ್ ಕೇಂದ್ರಿತ ನಕಲಿ ಖಾತೆಗಳು ದಲೈ ಲಾಮಾರನ್ನು ದೇಶಭ್ರಷ್ಟ ಟಿಬೆಟಿಯನ್ ನಾಯಕ ಎಂದು ಕರೆದಿದ್ದು, ಅವರ ಅನುಯಾಯಿಗಳನ್ನೂ ಸೇರಿಸಿ, ಭ್ರಷ್ಟಾಚಾರ ಮತ್ತು ಶಿಶುಕಾಮದ ಗಂಭೀರ ಆರೋಪ ಮಾಡಲಾಗಿದೆ. ಅಲ್ಲದೆ, ತಾವು ಸ್ವಾತಂತ್ರ್ಯ-ಪರ ಕಾರ್ಯಕರ್ತರೆಂದು ಹೇಳಿಕೊಂಡಿದ್ದಾರೆ ಎಂದು ಮೆಟಾ ವರದಿಯಲ್ಲಿ ತಿಳಿಸಿದೆ.
ಅರುಣಾಚಲ ಪ್ರದೇಶ ಕೇಂದ್ರಿತ ಖಾತೆಗಳು ಭಾರತೀಯ ಸೇನೆ, ಭಾರತೀಯ ಅಥ್ಲೀಟ್‌ಗಳು ಮತ್ತು ಭಾರತೀಯ ವೈಜ್ಞಾನಿಕ ಸಾಧನೆಗಳ ಬಗ್ಗೆ ಪಾಸಿಟಿವ್ ಆಗಿ ಪೋಸ್ಟ್ ಮಾಡಿದ್ದರೂ, ಮಣಿಪುರದಲ್ಲಿ ಭ್ರಷ್ಟಾಚಾರ ಮತ್ತು ಜನಾಂಗೀಯ ಹಿಂಸಾಚಾರವನ್ನು ಭಾರತ ಸರ್ಕಾರ ಬೆಂಬಲಿಸುತ್ತಿದೆ ಎಂದು ಆರೋಪಿಸಿರುವುದಾಗಿ ಫೇಸ್‌ಬುಕ್‌ನ ಮೂಲ ಕಂಪನಿ ತನ್ನ ವರದಿಯಲ್ಲಿ ಹೇಳಿದೆ.