ಚೀನಾ ನ್ಯೂಮೋನಿಯಾ ಪ್ರಕರಣಗಳು: ಭಾರತಕ್ಕೆ ಆತಂಕವಿಲ್ಲ ಎಂದ ಆರೋಗ್ಯ ಇಲಾಖೆ
ನವದೆಹಲಿ: ಚೀನಾದಲ್ಲಿ ಕಾಣಿಸಿಕೊಂಡಿದೆಯೆನ್ನಲಾದ ಎಚ್9ಎನ್2 ಇನ್ಫ್ಲುಯೆಂಝಾ ಸಾಂಕ್ರಾಮಿಕದ ಸೋಂಕಿಗೆ ಭಾರತ ಒಳಗಾಗುವ ಸಾಧ್ಯತೆ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಚೀನಾದಲ್ಲಿ ಮಕ್ಕಳ ಶ್ವಾಸಕೋಶದ ಕಾಯಿಲೆಗಳು ಮತ್ತು ನ್ಯುಮೋನಿಯ ಪ್ರಕರಣಗಳಲ್ಲಿ ಇತ್ತೀಚೆಗೆ ಉಂಟಾಗಿರುವ ಹೆಚ್ಚಳದ ಮೇಲೆ ನಿಗಾ ಇರಿಸಿರುವುದಾಗಿ ಸಚಿವಾಲಯವು ಹೇಳಿದೆ.
ಆರೋಗ್ಯ ಸಚಿವಾಲಯವು ತನ್ನ ಹೇಳಿಕೆಯಲ್ಲಿ, ಕಾಯಿಲೆಯ ಅಪಾಯ ಮಟ್ಟ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆಯ ವರದಿಯೊಂದನ್ನು ಉಲ್ಲೇಖಿಸಿದೆ. ”ಈ ಕಾಯಿಲೆಯು ಮಾನವನಿಂದ ಮಾನವನಿಗೆ ಹರಡುವ ಸಂಭವ ಕಡಿಮೆ. ಈವರೆಗೆ ವಿಶ್ವಸಂಸ್ಥೆಗೆ ವರದಿಯಾಗಿರುವ ಎಚ್9ಎನ್2 ಇದರ ಮಾನವ ಪ್ರಕರಣಗಳಲ್ಲಿ ಸಾವಿನ ದರವು ಕಡಿಮೆಯಾಗಿದೆ” ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಆದರೂ, ಎಚ್9ಎನ್2 ಹರಡುವಿಕೆಯ ಬಗ್ಗೆ ವಿಶ್ವಸಂಸ್ಥೆಯು ತನ್ನ ವರದಿಯಲ್ಲಿ ನಿರ್ದಿಷ್ಟವಾಗಿ ಪ್ರಸ್ತಾಪಿಸಿಲ್ಲ. ಆದರೆ, ಹೆಚ್ಚುತ್ತಿರುವ ಇನ್ಫ್ಲುಯೆಂಝದಂಥ ಕಾಯಿಲೆಗಳು ಮತ್ತು ನ್ಯುಮೋನಿಯ ಪ್ರಕರಣಗಳ ಬಗ್ಗೆ ಬೀಜಿಂಗ್ ನಿಂದ ಮಾಹಿತಿ ಕೋರಿದೆ.