ಇಸ್ರೇಲ್- ಗಾಜಾ ಸಂಘರ್ಷ: ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್
ಟೆಲ್ ಅವೀವ್: ಇಸ್ರೇಲ್ ಮತ್ತು ಗಾಜಾ ಸಂಘರ್ಷ ಮುಂದುವರೆದಿರುವಂತೆಯೇ ಅಂತಾರಾಷ್ಟ್ರೀಯ ಸಮುದಾಯದ ಮಧ್ಯ ಪ್ರವೇಶದ ಬಳಿಕ ಯುದ್ಧ ಆರಂಭವಾಗಿ 2 ತಿಂಗಳ ಬಳಿಕ ಹಮಾಸ್ ಉಗ್ರ ಸಂಘಟನೆ 25 ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹಮಾಸ್ ವಕ್ತಾರರು ಮಾಹಿತಿ ನೀಡಿದ್ದಾರೆ ಎಂದು ಏಜೆನ್ಸಿ ಫ್ರಾನ್ಸ್ ಪ್ರೆಸ್ (AFP) ಸುದ್ದಿ ಸಂಸ್ಥೆ ವರದಿ ಮಾಡಿದೆ. ವರದಿಯಲ್ಲಿರುವಂತೆ 13 ಮಂದಿ ಇಸ್ರೇಲಿ ಪ್ರಜೆಗಳು ಮತ್ತು 12 ಮಂದಿ ಥಾಯ್ಲೆಂಡ್ ಪ್ರಜೆಗಳು ಸೇರಿದಂತೆ ಒಟ್ಟು 25 ಮಂದಿ ಒತ್ತೆಯಾಳುಗಳನ್ನು ಹಮಾಸ್ ಸಂಘಟನೆ ಬಿಡುಗಡೆ ಮಾಡಿದೆ ಎನ್ನಲಾಗಿದೆ. ಈ 25 ಒತ್ತೆಯಾಳುಗಳನ್ನು ಶುಕ್ರವಾರ ಈಜಿಪ್ಟ್ ನ ರಾಫಾ ಗಡಿ ಮೂಲಕ ಇಸ್ರೇಲ್‌ಗೆ ಮರಳಲು ರೆಡ್‌ಕ್ರಾಸ್‌ಗೆ ಹಸ್ತಾಂತರಿಸಲಾಗಿದೆ. ಅವರನ್ನು ರೆಡ್ ಕ್ರಾಸ್ ಸಿಬ್ಬಂದಿಗಳು ಈಜಿಪ್ಟಿಗೆ ಹಸ್ತಾಂತರಿಸಲಿದ್ದಾರೆ ಎಂದು ಹೇಳಲಾಗಿದೆ.
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ್ದ ಹಮಾಸ್ ಬಂಡುಕೋರರು ಸುಮಾರು 1200 ಮಂದಿಯನ್ನು ಕೊಂದು 240 ಇಸ್ರೇಲಿ ಮತ್ತು ವಿದೇಶಿ ಪ್ರಜೆಗಳನ್ನು ಒತ್ತೆಯಾಳುಗಳಾಗಿರಿಸಿಕೊಂಡಿದ್ದರು. ಈ ದಾಳಿ ಬೆನ್ನಲ್ಲೇ ಗಾಜಾಪಟ್ಟಿಯಲ್ಲಿ ಯುದ್ಧ ಆರಂಭಿಸಿದ್ದ ಇಸ್ರೇಲ್ ಸೇನಾ ಪಡೆಗಳು ಹಮಾಸ್ ಬಂಡುಕೋರರ ನೆಲೆಗಳನ್ನು ಧ್ವಂಸಗೊಳಿಸುತ್ತಿದೆ. ಈ ದಾಳಿಯಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಮೂಲಗಳು ಆರೋಪಿಸಿದೆ.
ಹಮಾಸ್-ಇಸ್ರೇಲ್ ಯುದ್ಧದಲ್ಲಿ ಅಮಾಯಕ ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪುತ್ತಿರುವ ಹಿನ್ನಲೆಯಲ್ಲಿ ಜಾಗತಿಕ ಸಮುದಾಯ ಹಮಾಸ್ ಮತ್ತು ಇಸ್ರೇಲ್ ನಡುವೆ ಸಂಧಾನಕ್ಕೆ ಮುಂದಾಗಿತ್ತು. ಇದೀಗ ತಾತ್ಕಾಲಿಕ ಕದನ ವಿರಾಮಕ್ಕೆ ಇಸ್ರೇಲ್ ಮತ್ತು ಹಮಾಸ್ ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ.