ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನನ್ನ ಮನೆಗೆ ಬರುವುದು ಬೇಡ: ಯತ್ನಾಳ್

ವಿಜಯಪುರ: ಬಿಜೆಪಿ ಪಕ್ಷದಲ್ಲಿ ನಾನು ಹೊರಗುಳಿಯುವಂತೆ ಮಾಡುವಲ್ಲಿ ವಿಜಯೇಂದ್ರ ಅವರ ಪಾತ್ರ ಏನೆಂಬುದು ನನಗೆ ಗೊತ್ತಿದೆ. ಅಂದ ಮೇಲೆ ನನ್ನ ಭೇಟಿಗೆ ಮನೆಗೆ ಬರುವುದು ಬೇಡ. ಕಾಟಾಚಾರಕ್ಕೆ ನಾಟಕೀಯವಾಗಿ ಹೂಗುಚ್ಚ ಕೊಡಲು ಬರುವುದು ಬೇಡ. ಇದನ್ನು ನೋಡಿದ ಮಾಧ್ಯಮಗಳು ವಿಜಯೇಂದ್ರ ಅವರಿಗೆ ತಲೆಬಾಗಿದ ಯತ್ನಾಳ್ ಎಂದು ಸುದ್ದಿ ಆಗುವುದು ಬೇಡ ಎಂದು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮಂತ್ರಿ ಮಂಡಲದಲ್ಲಿ ನನಗೆ ಮಂತ್ರಿ ಸ್ಥಾನ ನೀಡದೇ ನನ್ನ ತುಳಿಯುವಲ್ಲಿ ನಡೆದ ನಿಮ್ಮ ಪ್ರಯತ್ನ ಬಗ್ಗೆ ಗೊತ್ತಿದೆ. ವಿಜಯಪುರ ಅಭಿವೃದ್ಧಿಗೆ ನೀಡಿದ್ದ 125 ಕೋಟಿ ಹಣ ವಾಪಸ್ ಪಡೆದಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ನೀಡಿದ ಕೆಲಸ ಕಾರ್ಯಗಳ ಪತ್ರಗಳು ವಿಜಯೇಂದ್ರ ಅವರು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು ಎಂದು ಮತ್ತೆ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಹೈಕಮಾಂಡ್ ಎಲ್ಲರ, ಎಲ್ಲ ನಾಯಕರ ಭಾವನೆಗಳನ್ನು ಪರಿಗಣಿಸಬೇಕಿತ್ತು. ಎಲ್ಲ ನಿರ್ಣಯ ಕೈಗೊಳ್ಳಲು ಇದು ಕಾಂಗ್ರೆಸ್ ಹೈಕಮಾಂಡ್ ಅಲ್ಲ ಎಂದು ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಅಸಮಧಾನ ವ್ಯಕ್ತಪಡಿಸಿದರು. ನಮ್ಮದು ಬಿಜೆಪಿ ಕಾರ್ಯಕರ್ತರ ಪಕ್ಷ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ವಿರುದ್ಧದ ಹೈಕಮಾಂಡ್ ಕೈಗೊಂಡ ನಿರ್ಣಯ ಯಾವುದೇ ಎಂಬುದನ್ನು ಕಾಲ ಬಂದಾಗ ತಿಳಿಸುತ್ತೇನೆ ಎಂದರು.