ಹಾನಗಲ್: ಬೆಳೆ ಸಮೀಕ್ಷೆ ನೋಂದಣಿ ಆಗದ ಕಾರಣ ತೋಟಗಾರಿಕೆ ಬೆಳೆಗಳಾದ ಮಾವು, ಅಡಿಕೆ ಸೇರಿದಂತೆ ಇತರ ತೋಟಗಾರಿಕೆ ಬೆಳೆ ವಿಮೆ ಕಂತು ತುಂಬಲು ಸಾಧ್ಯವಾಗುತ್ತಿಲ್ಲ. ಇದರಿಂದ ತೋಟಗಾರಿಕಾ ಬೆಳಗಾರರಿಗೆ ಅನ್ಯಾಯ ಉಂಟಾಗುತ್ತಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತಾಂತ್ರಿಕ ಸಮಸ್ಯೆ ಸರಿಪಡಿಸಿ ಬೆಳೆ ವಿಮೆ ಕಂತು ತುಂಬಲು ಅವಕಾಶ ಕಲ್ಪಿಸಲು ಪ್ರಯತ್ನಿಸುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ತೋಟಗಾರಿಕೆ ಇಲಾಖೆಯ ಸಹಾಯಕ
ನಿರ್ದೇಶಕ ಮಂಜುನಾಥ ಬಣಕಾರ ಅವರಿಗೆ ಸೂಚಿಸಿದರು.
ಸೋಮವಾರ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಮಟ್ಟದ ಪ್ರಮುಖ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಬೆಳೆವಿಮೆ ಕಂತು ತುಂಬಲು ಜು. 31 ಕೊನೆಯ ದಿನವಾಗಿದ್ದು, ಹೆಚ್ಚುವರಿ 15
ದಿನಗಳ ಕಾಲಾವಕಾಶ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಿರಿ, ತಾವೂ ಸಹ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು. ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಸರ್ಕಾರದ ನಿಯಮಾವಳಿ, ಅನುಸಾರ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ರೇಣುಕಾ ಎಸ್. ಅವರಿಗೆ ಸೂಚಿಸಿ, ಜು. 31 ರಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಹಾನಗಲ್ ತಾಲೂಕಿಗೆ ಭೇಟಿ ನೀಡುತ್ತಿದ್ದು, ಮಳೆಯಿಂದ
ಹಾನಿಗೀಡಾದ ರಸ್ತೆ, ಶಾಲೆ, ಅಂಗನವಾಡಿ ಕಟ್ಟಡ, ಕೃಷಿಭೂಮಿ ಪ್ರದೇಶಗಳನ್ನು ವೀಕ್ಷಿಸಲಿದ್ದಾರೆ. ಅಗತ್ಯ ಮಾಹಿತಿ ಸಿದ್ಧಪಡಿಸಿಕೊಳ್ಳಿ ಎಂದರು.
ತಾಲೂಕಿನಲ್ಲಿ ಈಗಾಗಲೇ ಶೇ. 94 ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಭತ್ತದ ನಾಟಿ ಪ್ರಕ್ರಿಯೆಯೂ ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿದೆ. 620 ಹೆಕ್ಟೇರ್ ಕೃಷಿ ಭೂಮಿಯಲ್ಲಿ ನದಿ ನೀರು ನುಗ್ಗಿದ್ದು, ಈ ಕುರಿತು ಈಗಾಗಲೇ ಪ್ರಾಥಮಿಕ ಮಾಹಿತಿ ಸಲ್ಲಿಸಲಾಗಿದೆ. 30,896 ರೈತರು 2024-25 ನೇ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನಕುಮಾರ ಸಭೆಗೆ ಮಾಹಿತಿ ನೀಡಿದರು. ಹಿರೇಕಾಂಶಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಎಲ್ಲ 78 ಕೆರೆಗಳೂ ಸಂಪೂರ್ಣವಾಗಿ ಭರ್ತಿಯಾಗಿದ್ದರಿಂದ ನೀರು ಹರಿಸುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಭತ್ತದ ನಾಟಿ ಕಾರ್ಯಕ್ಕೆ ರೈತರು ನೀರು ಬಳಸಿಕೊಂಡರೆ ಮತ್ತೆ
ನೀರು ಹರಿಸಲಾಗುವುದು. ಧರ್ಮಾ ಜಲಾಶಯವೂ ಈಗಾಗಲೇ ಕೋಡಿ ಬಿದ್ದಿದ್ದು, ಜಲಾಶಯದ ಅಚ್ಚುಕಟ್ಟು ಪ್ರದೇಶದ ಎಲ್ಲ 96 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಪ್ರತಿದಿನ 540 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದ್ದು, ಶೇ. 60 ರಷ್ಟು ಕೆರೆಗಳು ಭರ್ತಿಯಾಗಿವೆ. ಮುಂದಿನ ೧೫ ದಿನಗಳಲ್ಲಿ ಎಲ್ಲ ಕೆರೆಗಳೂ ಭರ್ತಿಯಾಗುವ ಆಶಾಭಾವನೆ ಇದ
ಎಂದು ಹಿರೇಕಾಂಶಿ ಏತ ನೀರಾವರಿ ಯೋಜನೆಯ ಎಇಇ ಪ್ರಹ್ಲಾದ್ ಶೆಟ್ಟಿ ಮಾಹಿತಿ ನೀಡಿದರು.
ಮಳೆಯಿಂದ ತಾಲೂಕಿನ 5 ಶಾಲೆಗಳ ಕೊಠಡಿಗಳು ಹಾನಿಗೀಡಾಗಿವೆ. ಮುಂಜಾಗ್ರತೆ ಕ್ರಮವಾಗಿ ದುಸ್ಥಿತಿ
ತಲುಪಿರುವ ಕೊಠಡಿಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿಲ್ಲ, ದುಸ್ಥಿತಿ ತಲುಪಿರುವ ಕೊಠಡಿಗಳ ಸಂಪೂರ್ಣ ಮಾಹಿತಿ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಬಿಇಒ ವಿ.ವಿ.ಸಾಲಿಮಠ ತಿಳಿಸಿದರು.ತಾಪಂ ಇಒ ಪರಶುರಾಮ್, ಸಣ್ಣ ನೀರಾವರಿ ಇಲಾಖೆಯ ಎಇಇ ಮದನಕುಮಾರ ಹಾವನೂರ, ಟಿಎಚ್‌ಒ ಡಾ.ಲಿಂಗರಾಜ ಕೆ.ಜಿ. ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.