ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ ಮರೆತಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಶ್ರಮಿಸಿದ ಜನರಿಗೆ, ಗೆಲುವಿಗೆ ದುಡಿದ ಸಂಘಟನೆಗಳಿಗೆ,ಸಮುದಾಗಳಿಗೆ ಕೃತಜ್ಞತೆ ಸಲ್ಲಿಸುವ ಕೆಲಸವನ್ನು ಮಾನವ ಬಂಧುತ್ವ ವೈದಿಕೆ,ಶೋಷಿತ ಸಮುದಾಯಗಳ ಒಕ್ಕೂಟ ಮಾಡುತ್ತಿದೆ.
ಹೌದು, ನವೆಂಬರ್ 23 ಶಿಗ್ಗಾವಿ – ಸವಣೂರಿನ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರಿಗೆ ಐತಿಹಾಸಿಕ ದಿನ ಎಂದರೆ ತಪ್ಪಾಗಲಾರದು. ಕಳೆದ 30 ವರ್ಷಗಳ ಕಾಂಗ್ರೆಸ್ ಕಾರ್ಯಕರ್ತರ ವನವಾಸ ಅಂತ್ಯವಾದ ದಿನ ಅದು.ಕಾಂಗ್ರೆಸ್ ಬಾವುಟ ಹಿಡಿದು, ಮೈ ಮೇಲೆ ಬಣ್ಣ ಹಾಕಿಕೊಳ್ಳಲು ಹಾತೋರೆಯುತ್ತಿದ್ದ ಮನಸ್ಸುಗಳ ಕನಸು ನಿಜವಾದ ದಿನ ಅದು.
ಕಾಂಗ್ರೆಸ್ ಕಾರ್ಯಕರ್ತರ ಆ ಕನಸನ್ನು ನನಸಾಗಿಸಲು ಹಗಲು,ರಾತ್ರಿ ಶ್ರಮವಹಿಸಿ ದುಡಿದ ಸಂಘಟನೆಗಳು ಹತ್ತಾರು,ಅದರಲ್ಲಿ ಪ್ರಮುಖವಾಗಿರುವುದು ಮಾನವ ಬಂಧುತ್ವ ವೇದಿಕೆ. ಈ ಸಂಘಟನೆಯ ಶ್ರಮದಿಂದ ಇಂದು ಶಿಗ್ಗಾವಿಯಲ್ಲಿ ಕಾಂಗ್ರೆಸ್ ಬಾವುಟ ಹಾರಾಡುತ್ತಿದೆ ಎಂದರೆ ತಪ್ಪಾಗಲಾರದು.
ಈಗಾಗಲೇ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರು ಈ ಸಂಘಟನೆ ಮೈ ಮರೆತಿಲ್ಲ. ಜೊತೆಗೆ ಈ ಸಂಭ್ರಮಕ್ಕೆ ಸಾಕ್ಷಿಯಾಗಿರುವ ಕ್ಷೇತ್ರದ ಜನರ ಬಳಿ ತೆರಳಿ, ಅವರಿಗೆ ಮನಃಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತಿದೆ.ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ತೋಳಿ ಭರಮಣ್ಣ, ಶೋಷಿತ ಸಮುದಾಯಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಅನಂತ ನಾಯ್ಕ್ ಹಾಗೂ ತಂಡದವರು ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡಿದ ಮತದಾರರ ಮನೆಮನೆಗೆ ತೆರಳಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.
ಕೆಲ ನಾಯಕರು ನೀ ಮುಂದು, ನಾ ಮುಂದು ಎಂಬಂತೆ ಈ ಗೆಲುವಿನ ಶ್ರೇಯಸ್ಸನ್ನು ಪಡೆದುಕೊಳ್ಳಲು ಹವಣಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮಾಧ್ಯಮಗಳ ಮೂಲಕ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಗದ್ದಲದ ನಡುವೆ ಮತ ಚಲಾಯಿಸಿದ ಜನರನ್ನು, ಶ್ರಮವಹಿಸಿ ದುಡಿದ ವಿವಿಧ ಜನಪರ ಸಂಘಟನೆಗಳ ಕಾರ್ಯಕರ್ತರನ್ನು, ಬಿಜೆಪಿಯನ್ನು ಮಣಿಸಲು ನಿಸ್ವಾರ್ಥವಾಗಿ ತೊಡಗಿಸಿಕೊಂಡು ಕೆಲಸ ಮಾಡಿದ ಸಂಘಟನೆಗಳನ್ನು ಮರೆತೇಬಿಟ್ಟಿದ್ದಾರೆ. ಆದರೆ ಈ ಗೆಲುವಿನಲ್ಲಿ ಜನ, ಕಾರ್ಯಕರ್ತರು ಹಾಗೂ ಸಂಘಟನೆಗಳು ವಹಿಸಿದ ನಿರ್ಣಾಯಕ ಪಾತ್ರದತ್ತ ಗಮನ ಸೆಳೆಯಲು ಶೋಷಿತ ಸಮುದಾಯಗಳ ಒಕ್ಕೂಟ,ಮಾನವ ಬಂಧುತ್ವ ವೇದಿಕೆ,ಮುಂದಾಗಿದೆ.
ಫಲಿತಾಂಶ ಬಂದ ಮರುದಿನ ಶಿಗ್ಗಾವಿಗೆ ಬಂದ ಸಂಘಟನೆಗಳ ಪದಾಧಿಕಾರಿಗಳು ಚುನಾವಣೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸಂಘಟನೆಗಳು, ಸಮುದಾಯಗಳ ಮುಖಂಡರನ್ನು ಒಗ್ಗೂಡಿಸಿ ಸಭೆ ನಡೆಸಿ ಆ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.ಕಾಂಗ್ರೆಸ್ ಪಕ್ಷ ಮಾಡಬೇಕಾದ ಕೆಲಸವನ್ನು ಮಾನವ ಬಂಧುತ್ವ ವೇದಿಕೆ, ಶೋಷಿತ ಸಮುದಾಯಗಳ ಒಕ್ಕೂಟ ಮಾಡುತ್ತಿದೆ. ಆ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ತೋಳಿ ಭರಮಣ್ಣ ಅವರ ತಂಡ ಮಾಡುತ್ತಿದೆ.
ನಿಜಕ್ಕೂ ಶಿಗ್ಗಾಂವಿ ವಿಧಾನಸಭೆಯ ಗೆಲುವು ಸಾಮಾನ್ಯ ಗೆಲುವಲ್ಲ. ಶಿಗ್ಗಾವಿಯನ್ನು ಭದ್ರಕೋಟೆಯನ್ನಾಗಿ ಮಾಡಿಟ್ಟುಕೊಂಡಿದ್ದ, ಮಾಜಿ ಮುಖ್ಯಮಂತ್ರಿ ವಿರುದ್ಧ, ಯಾರೂ ಹೆಸರು ಕೇಳದ, ಮುಸ್ಲಿಂ ಸಮುದಾಯದ ಅಭ್ಯರ್ಥಿ ಜಯಗಳಿಸುವುದೆಂದರೆ ಸುಲಭವಲ್ಲ. ಆದರೆ ಇದು ಕೇವಲ ಶಿಗ್ಗಾವಿಯಲ್ಲಿ ಕಾಂಗ್ರೆಸ್ಸಿನಿಂದ ಗೆಲುವು ಸಾಧಿಸಿದ ಪಠಾಣ್ ಅವರ ಸಾಧನೆಯೋ, ಕಾಂಗ್ರೆಸ್ ತಾನಾಗೇ ಪಡೆದ ವಿಜಯವೋ ಅಲ್ಲ. ಸೋಲು ಕಟ್ಟಿಟ್ಟ ಬುತ್ತಿ ಎಂದುಕೊಂಡಿದ್ದ ಶಿಗ್ಗಾವಿ ಗೆಲುವಿನತ್ತ ಸಾಗಿರುವ ಹಿಂದಿನ ಶ್ರಮ ಸಂಘಟನೆಗಳಿಗೆ ಸಲ್ಲುತ್ತದೆ ಎಂಬುದು ಅಕ್ಷರಶಃ ಸತ್ಯ.