ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಷಯ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರ ನಡುವೆ ರಾಜಕೀಯ ತಿಕ್ಕಾಟದ ಸರಕಾಗಿದೆ. ಇನ್ನೊಂದೆಡೆ ಮಂಡ್ಯದಲ್ಲಿ ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ಮುಂದುವರಿಸಿವೆ. ನ್ಯಾಯಾಲಯದಲ್ಲಿರುವ ಜಲ ವಿವಾದಕ್ಕೆ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂಬ ದಾಳವನ್ನು ಕಾಂಗ್ರೆಸ್ ಉರುಳಿಸಿದೆ. ಪ್ರತಿಯಾಗಿ, ಜಲಾಶಯದಿಂದ ನೀರು ಬಿಡುಗಡೆ ಮಾಡಬಾರದು ಎಂಬ ವಾದ ಮುಂದಿಡುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.
ನೀರು ಬಿಡಲು ನಾವು ತಯಾರಿಲ್ಲ. ಹೀಗಾಗಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ, ನ್ಯಾಯಲಯದ ಹೊರಗಡೆ ಇತ್ಯರ್ಥ ಮಾಡಿಕೊಳ್ಳಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೀಡಿರುವ ಸಲಹೆ ಸ್ವೀಕಾರ್ಹವಾಗಿದೆ ಎಂದರು. ನೀರಾವರಿ ಸಚಿವರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಪಯುಕ್ತ ಸಲಹೆ ನೀಡಲಿ. ಅವರೇ ನೇಮಕ ಮಾಡಿದ ಕಾನೂನು ತಜ್ಞರೇ ಈಗಲೂ ಇದ್ದಾರೆ. ಅವರ ಮಾತನ್ನು ಕೇಳಬೇಕೋ ಅಥವಾ ಇವರ ಮಾತನ್ನು ಕೇಳಬೇಕೋ? ಒಳ್ಳೆ ಸಲಹೆ ನೀಡಿದರೆ ಮಾತ್ರ ಅವರ ಮಾತನ್ನು ಕೇಳುತ್ತೇವೆ ಎಂದರು. ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಸರ್ಕಾರ ಸೆ.12ರ ನಂತರ ತಮಿಳುನಾಡಿಗೆ ನೀರು ಬಿಡಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮುಂದೆ ಅಫಿಡೆವಿಟ್ ಹಾಕಿದೆ. ಅದಕ್ಕೆ ತಾವು ಬದ್ಧರಾಗಿರಬೇಕಲ್ಲ. ಸರ್ಕಾರದ ಅಫಿಡೆವಿಟ್ ಅಂದರೆ ಸುಮ್ಮನೆ ಅಲ್ಲ ಎಂದಿದ್ದಾರೆ.
ತೀವ್ರ ವಿರೋಧದ ನಡುವೆಯೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಸೋಮವಾರ ತಡರಾತ್ರಿಯಿಂದ ತಮಿಳುನಾಡಿಗೆ ಕೆಆರ್ಎಸ್ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಇದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಮಂಗಳವಾರ ಮಂಡ್ಯ, ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಪ್ರಾಧಿಕಾರದ ಸೂಚನೆ ಮೇರೆಗೆ ಕೆಆರ್ಎಸ್ ಮತ್ತು ಕಬಿನಿ ಡ್ಯಾಂನಿಂದ ತಮಿಳುನಾಡಿಗೆ ಒಟ್ಟು 2,898 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಕೆಆರ್ಎಸ್ನಿಂದ 1,235 ಹಾಗೂ ಕಬಿನಿ ಜಲಾಶಯದಿಂದ 1,663 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.