ಬೆಂಗಳೂರು: ತಮಿಳುನಾಡಿಗೆ ನೀರು ಬಿಡುವ ಆದೇಶದ ಹಿನ್ನೆಲೆಯಲ್ಲಿ ರಾಜ್ಯವು ಅತಂತ್ರ ಸ್ಥಿತಿಯಲ್ಲಿದ್ದು, ಕೇಂದ್ರ ಸರ್ಕಾರವು ಮಧ್ಯಸ್ಥಿಕೆ ವಹಿಸಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಒತ್ತಾಯಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಠಿಣ ಪರಿಸ್ಥಿತಿಯಲ್ಲಿದ್ದೇವೆ. ನಮಗೇ ನೀರಿದಿದ್ದರೂ, ನಾವು ಅಧಿಕಾರಿಗಳ ನಿರ್ಧಾರವನ್ನು ಗೌರವಿಸಬೇಕಾಗಿದೆ. ಆದರೆ, ನಾವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತಿದ್ದೇವೆ ಮತ್ತು ನಾನು ನವದೆಹಲಿಗೆ ಹೋಗುತ್ತಿದ್ದೇನೆ ಎಂದಿದ್ದಾರೆ.
ನಮಗೆ ಸಹಾಯ ಮಾಡಲು ಮತ್ತು ಮಧ್ಯಸ್ಥಿಕೆ ವಹಿಸುವಂತೆ ನಾವು ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಅಣೆಕಟ್ಟುಗಳಿಗೆ ಒಳಹರಿವು ಇಲ್ಲ, ನಾವು ತುಂಬಾ ಕಷ್ಟಪಡುತ್ತಿದ್ದೇವೆ ಮತ್ತು ಕೇಂದ್ರ ಸರ್ಕಾರ ನಮಗೆ ಸಹಾಯ ಮಾಡಬೇಕು. ಕರ್ನಾಟಕವನ್ನು ಉಳಿಸಲು ಬಿಜೆಪಿ ಕೈಜೋಡಿಸಬೇಕು’ ಎಂದು ಅವರು ಒತ್ತಾಯಿಸಿದರು.
‘ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಲಹೆಯನ್ನು ಪರಿಗಣಿಸುತ್ತೇನೆ. ಅವರು ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಲು ಮತ್ತು ಕಾನೂನು ಹೋರಾಟ ನಡೆಸುವಂತೆ ಸೂಚಿಸಿದ್ದರು. ನಾಡಿದ್ದು ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ. ನಾವು ನೀರು ಬಿಡಲು ಬಯಸುವುದಿಲ್ಲ. ಆದರೂ, ನ್ಯಾಯಾಲಯದ ಆದೇಶವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ’ ಎಂದರು.