ಹಾವೇರಿ: ಹಾವೇರಿ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸೈನಿಕರ ತ್ಯಾಗ, ಬಲಿದಾನಗಳನ್ನು ಸ್ಮರಿಸುವ ‘ಗೌರವ ಸಭಾಂಗಣ’ವನ್ನು ನಿರ್ಮಿಸಲಾಗುವುದು. ಇದು ದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲೇ ಮೊದಲ ಪ್ರಯತ್ನವಾಗಲಿದೆ ಎಂದು ಕುಲಪತಿ ಪ್ರೊ. ಸುರೇಶ ಎಚ್. ಜಂಗಮಶೆಟ್ಟಿ ಹೇಳಿದರು.
ಶುಕ್ರವಾರ ಕೆರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ‘ಕಾರ್ಗಿಲ್ ವಿಜಯ್ ದಿವಸ್’ ಆಚರಣೆಯ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದ ಗಡಿಗಳ ರಕ್ಷಣೆಯಲ್ಲಿ ಯೋಧರ ಪಾತ್ರ ಮಹತ್ತರವಾಗಿದೆ. ಸೈನಿಕರು ದೇಶಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ಅವರ ಸೇವೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ವಿನೂತನ ಹೆಜ್ಜೆ ಇರಿಸಲಿದೆ ಎಂದರು.
ಕರ್ನಲ್ ರಮೇಶ ತಿಮ್ಮಾಪುರ ಮಾತನಾಡಿ, ಭಾರತೀಯ ಸೈನಿಕರು ಎಂಥದೇ ಕಠಿಣ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಹೋರಾಡುವ ಸಾಮರ್ಥ, ದೇಶಭಕ್ತಿಯನ್ನು ಹೊಂದಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿನ ಜಯವು ಭಾರತೀಯರಿಗೆಲ್ಲ ಹೆಮ್ಮೆಯ ಸಂಗತಿಯಾಗಿದೆ. ಈ ಯುದ್ಧದಲ್ಲಿ ಮಡಿದ ವೀರಯೋಧರ ಪರಾಕ್ರಮ, ತ್ಯಾಗ, ಬಲಿದಾನಗಳು ಇಂದಿನ ಯುವಜನತೆಗೆ ಸದಾ ಆದರ್ಶಪ್ರಾಯವಾಗಿವೆ ಎಂದರು.
ಕ್ಯಾಪ್ಟನ್ ರಾಜಾ ಪಾಟೀಲ, ಪದವಿ ವಿದ್ಯಾರ್ಥಿಗಳಿಗೆ ಭಾರತೀಯ ಸೈನ್ಯದಲ್ಲಿ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗಳಲ್ಲಿ ವಿಫುಲ ಅವಕಾಶಗಳಿದ್ದು, ವಿದ್ಯಾರ್ಥಿ, ಯುವಜನರು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಹಿಳೆಯರೂ ಇಂದು ಸೈನ್ಯದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಲು ಮುಂದಾಗುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.
ಪ್ರಶಿಕ್ಷಣ ಭಾರತಿ ಜಿಲ್ಲಾ ಸಂಯೋಜಕ ರಾಘವೇಂದ್ರ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಗೀತಾಂಜಲಿ ಕುರಡಗಿ ಸ್ವಾಗತಿಸಿದರು. ವಿಜಯಕುಮಾರ ಕೆಲೂರ, ಐಶ್ವರ್ಯ ಮುದಿಗೌಡರ ಪರಿಚಯಿಸಿದರು. ಡಾ. ಚಿದಾನಂದ ಕಮ್ಮಾರ್ ನಿರೂಪಿಸಿದರು. ಡಾ. ವಿಶ್ವನಾಥ ಚಿಂತಾಮಣಿ ವಂದಿಸಿದರು.