
ಹಾವೇರಿ : ಅತಿವೃಷ್ಟಿಯಿಂದ ಸಂಪೂರ್ಣ ಹಾನಿಯಾದ ಮನೆಗಳ ನಿರ್ಮಾಣ ಕುರಿತು ಹೊಸ ಮಾರ್ಗಸೂಚಿಗಳ ಬಗ್ಗೆ ಇಂದು ಸಂಜೆ ಮಾನ್ಯ ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ. ಎಂದು ಜವಳ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ತಿಳಿಸಿದರು.
ಹಾನಗಲ್ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು. ಕಳೆದ ವರ್ಷ ಅನಾವೃಷ್ಟಿಯಾಗಿತ್ತು. ಈ ವರ್ಷ ಅತಿವೃಷ್ಟಿಯಿಂದ ರಾಜ್ಯದಲ್ಲಿ ಹಾನಿಯಾಗಿದೆ. ಜಿಲ್ಲೆಯಲ್ಲಿ ಜೀವಹಾನಿ, ಮನೆಹಾನಿ ಹಾಗೂ ಬೆಳೆಹಾನಿ ಸಂಭವಿಸಿದೆ. ಜೀವಹಾನಿಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಶಿಥಾಲವಸ್ಥೆಯ ಮಣ್ಣಿನ ಮನೆಗಳಲ್ಲಿ ವಾಸಿಸುವವರಿಗೆ ಶಾಲೆ-ಅಂಗನವಾಡಿಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಲಾಗಿದೆ. ಮಳೆಯ ಸಂದರ್ಭದಲ್ಲಿ ಶಿಥಿಲಾವಸ್ಥೆ ಮಣ್ಣಿನ ಮನೆಗಳಲ್ಲಿ ಸಾರ್ವಜನಿಕರು ವಾಸಿಸಬಾರದು ಎಂದು ಮನವಿ ಮಾಡಿಕೊಂಡರು.
ಜಿಲ್ಲೆಯ ಹಾನಗಲ್ ಹಾಗೂ ಶಿಗ್ಗಾಂವ ತಾಲೂಕಿನಲ್ಲಿ ಅಧಿಕ ಮಳೆಯಿಂದ ಹಾನಿಯಾಗಿದ್ದು, ಇಂದು ಕುಣಿಮೆಳ್ಳಿಹಳ್ಳಿ, ನಾಗನೂರ, ಸಂಗೂರ, ಕೂಡಲ, ಬಾಳಂಬೀಡ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆಹಾನಿ ಹಾಗೂ ಮನೆಹಾನಿಗಳ ಪರಿಶೀಲನೆ ಮಾಡಲಾಗಿದೆ. ಶೇ.53 ರಷ್ಟು ಬೆಳೆಹಾನಿ ಸರ್ವೇ ಮಾಡಲಾಗಿದೆ. ಮಳೆ ನಿಂತ ನಂತರ ಸಂಪೂರ್ಣ ಸರ್ವೇಮಾಡಲಾಗುವುದು ಎಂದು ತಿಳಿಸಿದರು.
ನಾಗನೂರ-ಕೂಡಲ ಸೇತುವೆ ಭೂಸ್ವಾಧೀನ ಪ್ರಕರಣ ಬಾಕಿ ಇರುವುದರಿಂದ ಕಾಮಗಾರಿ ವಿಳಂಬಾಗಿದೆ. ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು. ಶೇ.65 ರಿಂದ 70 ರಷ್ಟು ಕೆರೆಗಳನ್ನು ತುಂಬಿಸಲಾಗಿದೆ. ಬರುವ ದಿನಗಳಲ್ಲಿ ಎಲ್ಲ ಕೆರೆಗಳನ್ನು ತುಂಬಿಸಲಾಗುವುದು. ತಡಸ, ಆನೂರ ಹಾಗೂ ಹಂಸಭಾವಿ ನೀರಾವರಿ ಯೋಜನೆಗಳು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ. ಇದರಿಂದ 440 ಗ್ರಾಮಗಳಿಗೆ ನೀರಿನ ಸೌಲಭ್ಯ ದೊರೆಯಲಿದೆ ಎಂದರು.
ಹಾವೇರಿ ತಹಶೀಲ್ದಾರ ಕಚೇರಿ ಮೇಲ್ದಾವಣಿ ಸೋರುತ್ತಿರುವ ಕಾರಣ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಜಿಲ್ಲಾ ಆಸ್ಪತ್ರೆಗೆ ಶೀಘ್ರದಲ್ಲೇ ಹೊಸ ಎಂ.ವಿ.ಆರ್.ಸ್ಕ್ಯಾನಿಂಗ್ ಯಂತ್ರ ಬರಲಿದೆ ಎಂದು ತಿಳಿಸಿದರು.
ಮನೆಹಾನಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಮಳೆಯಿಂದ ಐದು ಮನೆಗಳು ಸಂಪೂರ್ಣ, 11 ಮನೆಗಳಿಗೆ ತೀವ್ರಹಾನಿ, 1444 ಮನೆಗಳಿಗೆ ಭಾಗಶಃ ಹಾನಿ ಸೇರಿ 1460 ಮನೆಗಳಿಗೆ ಹಾನಿಯಾಗಿದೆ. 15 ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ ಹಾಗೂ 13 ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಆರು ಮಾನವ ಜೀವಹಾನಿ ಹಾಗೂ ಮೂರು ಜಾನುವಾರು ಹಾನಿ ಸಂಭವಿಸಿದೆ. ಜೀವಹಾನಿಗಳಿಗೆ ತಲಾ ಐದು ಲಕ್ಷದಂತೆ ರೂ.30 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ ಎಂದರು.