ಹಾವೇರಿ: ದೇಶದಲ್ಲಿ ಆಡಳಿತ ಮಾಡುವ ಸರ್ಕಾರಗಳಿಂದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಲಿದಾನಗೈದ ವೀರರ ಆಶಯಗಳಾದ ಶಿಕ್ಷಣ, ಉದ್ಯೋಗ, ವಸತಿ, ಆಹಾರ, ಘನತೆ ಬದುಕ ಕಟ್ಟಿಕೊಡಲು ಸಾದ್ಯವಾಗುತ್ತಿಲ್ಲ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
ಶಿವಾಜಿ ನಗರದಲ್ಲಿರುವ ಎಸ್ಎಫ್ಐ-ಡಿವೈಎಫ್ಐ ಕಛೇರಿ ಎದುರು ಮಧ್ಯೆ ರಾತ್ರಿ12 ಗಂಟೆಗೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಹಾವೇರಿ ಜಿಲ್ಲಾ ಸಮಿತಿಗಳು ಏರ್ಪಡಿಸಿದ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ದೊರಕಿ 78 ವಸಂತಗಳು ಕಳೆದರು ಶಿಕ್ಷಣ ಉದ್ಯೋಗ ಮೂಲಭೂತ ಹಕ್ಕು ಆಗುವ ಬದಲಿಗೆ ನಾಶವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಕ್ರಾಂತಿಕಾರಿ ಹೋರಾಟಗಾರರನ್ನು ಅಧ್ಯಯನ ಮಾಡಬೇಕು ಆ ನಿಟ್ಟಿನಲ್ಲಿ ಅವರ ಆಶಯಗಳನ್ನು ನನಸು ಮಾಡಲು ವಿದ್ಯಾರ್ಥಿ-ಯುಜನರು ಮುಂದಾಗಬೇಕೆಂದರು.
ಯುವ ಪತ್ರಕರ್ತ ನಿಂಗಪ್ಪ ಆರೇರ್ ಮಾತನಾಡಿ, ದೇಶವೆಂದರೆ ಒಂದು ಚೌಕಟ್ಟಿನ ವ್ಯವಸ್ಥೆಯಲ್ಲ ಸಾಮಾನ್ಯ ಜನರ ಶೈಕ್ಷಣಿಕ, ಸಮಾಜಿಕ ಸಾರ್ವಂಗೀಣ ಅಭಿವೃದ್ಧಿಯನ್ನು ಹೊಂದಿರುತ್ತದೆ. ಸ್ವಾತಂತ್ರ್ಯ ಹೋರಾಟಗಾರ ಆದರ್ಶಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿ-ಯುವಜನ ದೇಶಕ್ಕಾಗಿ ಸಾಧನೆ ಮಾಡಬೇಕೆಂದು ಅಭಿಪ್ರಾಯ ಪಟ್ಟರು.
ಎಸ್ಎಫ್ಐ ಮಾಜಿ ಜಿಲ್ಲಾಧ್ಯಕ್ಷೆ ರೇಣುಕಾ ಕಹಾರ ಮಾತನಾಡಿ, ದೇಶದ ಅಭಿವೃದ್ಧಿ ಎಂದರೆ ಉಳವರಿಗೆ ಶಿಕ್ಷಣ ದೊರೆತರೆ ಸಾಲದು ಪ್ರತಿಯೊಬ್ಬರಿಗೂ ಶಿಕ್ಷಣ, ಉದ್ಯೋಗ ಸಿಗಬೇಕು ಆಗ ಮಾತ್ರ ದೇಶ ಸದೃಢವಾಗಲು ಸಾದ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಸ್ಎಫ್ಐ ಜಿಲ್ಲಾ ಸಹ ಬಸವರಾಜ ಎಸ್ ಮಾತನಾಡಿದರು. ಈ ಸಂದರ್ಭದಲ್ಲಿ ಮುತ್ತು ಹರಿಜನ, ಮಾರಪ್ಪ ಮ್ಯಗಳಮನಿ, ವಿಜಯ ಶಿರಹಟ್ಟಿ, ಹಾಸ್ಟೆಲ್ ಘಟಕ ಅಧ್ಯಕ್ಷ ಪ್ರಜ್ವಲ್ ಹೆಚ್, ಕಾರ್ಯದರ್ಶಿ ಮಾಲತೇಶ್ ಹಳ್ಳಳ್ಳಿ, ನಾಗರಾಜ ಕೆ ಆರ್, ಸುದೀಪ್ ಡಿ ಟಿ, ಮಲೇಶ್ ಆರ್ ಡಿ ಉಪಸ್ಥಿತರಿದ್ದರು. ಸುಲೆಮಾನ್ ಮತ್ತಿಹಳ್ಳಿ ಸ್ವಾಗತಿಸಿ ವಂದಿಸಿದರು.