
ಹಾವೇರಿ: ಹಾನಗಲ್ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿ ಹಾನಗಲ್ ತಾಲೂಕಿನ ಸಾರ್ವಜನಿಕರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಹಾಗೂ ಅಬಕಾರಿ ಡಿಸಿ ಅವರಿಗೆ ಮನವಿ ಸಲ್ಲಿಸಲಾಯಿತು.

ಹಾನಗಲ್ ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಅಕ್ರಮ ಮದ್ಯ ಮಾರಾಟ ಮಿತಿಮೀರಿದ್ದರೂ ಕೂಡ ಅಬಕಾರಿ ಇಲಾಖೆಯ ಅಧಿಕಾರಿಗಳು ಜಾಣ ಮೌನಕ್ಕೆ ಜಾರಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಹೋಟೆಲ್, ಬಿಡಾ ಶಾಪ್, ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಯಥೇಚ್ಛವಾಗಿ ಮಾರಾಟ ಮಾಡಲಾಗುತ್ತಿದೆ. ಕೂಲಿನಾಲಿ ಮಾಡಿ ಬದುಕಿನ ಬಂಡಿ ಎಳೆಯುವ ಅಸಂಖ್ಯಾತ ಕುಟುಂಬಗಳು ಮದ್ಯ ಸೇವನೆಯಿಂದ ಬದುಕು ನಾಶ ಪಡಿಸಿಕೊಂಡು ಬೀದಿಗೆ ಬರುತ್ತಿದ್ದರೂ ಅಬಕಾರಿ ಇಲಾಖೆಯ ಅಧಿಕಾರಿಗಳ ಮನ ಕರಗುತ್ತಿಲ್ಲ.

ಜಿಲ್ಲಾಮಟ್ಟದ ಮತ್ತು ತಾಲೂಕಾ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಲವು ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರೂ ಕೂಡ ಅಧಿಕಾರಿಗಳು ಕ್ರಮ ಜರುಗಿಸಿಲ್ಲ. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಜಿಪಿಎಸ್ ಫೋಟೊ, ವಿಡಿಯೋ ಕಳುಹಿಸಿ ಮಾಹಿತಿ ನೀಡಿದರೂ ದಾಳಿ ನಡೆಸುವಲ್ಲಿ ಮೀನಾಮೇಷ ಎಣಿಸಲಾಗುತ್ತಿದೆ. ಹತ್ತು, ಹಲವು ಬಾರಿ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸದರೂ ಹಾರಿಕೆ ಉತ್ತರ ನೀಡಲಾಗುತ್ತಿದೆ. ಮೊನ್ನೆ ಹಾನಗಲ್ ತಾಲೂಕಿನ ಬ್ಯಾತನಾಳ ಗ್ರಾಮದ ಭೀಮಪ್ಪ ತಹಶೀಲ್ದಾರ್ ಎಂಬುವರ ಮನೆ ಮೇಲೆ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಗೋವಾ ರಾಜ್ಯದಿಂದ ಅಕ್ರಮವಾಗಿ ತಂದು ಮಾರಾಟ ಮಾಡುತ್ತಿದ್ದ 200 ಲೀಟರ್‌ಕ್ಕೂ ಹೆಚ್ಚು ಅಕ್ರಮ ಮದ್ಯ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಿಂದ ಕರ್ನಾಟಕ ರಾಜ್ಯ ಸರಕಾರಕ್ಕೆ ಆದಾಯದ ಕೊರತೆಯು ಸಹ ಉಂಟಾಗಿದ್ದು, ತಾಲೂಕಿನಲ್ಲಿ ಅನೇಕ ಕಡೆ ಈ ರೀತಿ ಗೋವಾ ರಾಜ್ಯದ ಮಧ್ಯ ಮಾರಾಟ ಮಾಡುತ್ತಿರುವುದರಿಂದ ರಾಜ್ಯದ ಆದಾಯಕ್ಕೂ ಸಹ ಹಿನ್ನಡೆಯುಂಟಾಗುತ್ತಿದೆ.
ಅದಲ್ಲದೇ ಕೆಲ ದಿನಗಳ ಹಿಂದೆ ಗಾಂಜಾ ಮಾರಾಟ ಪ್ರಕರಣವನ್ನೂ ಪೊಲೀಸ್ ಇಲಾಖೆಯ ಅಧಿಕಾರಿಗಳೇ ಪತ್ತೆ ಹೆಚ್ಚಿದ್ದಾರೆ. ಆಡೂರ ಪೊಲೀಸ್ ಠಾಣಾ ವ್ಯಾಪ್ತಿಯ ಕಿರವಾಡಿ ಗ್ರಾಮದಲ್ಲಿ ಅಕ್ರಮವಾಗಿ ಒಂದೂವರೆ ಕೆ.ಜಿ ಗಾಂಜಾ ಮಾರಾಟ ಮಾಡುತ್ತಿದ್ದ ಮಾಲತೇಶ ಬಳಿಗಾರ, ಪರಶುರಾಮ ಗಂಜಿಗಟ್ಟಿ, ಖಾದರ ಬ್ಯಾಡಗಿ ಎಂಬುವವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ತಾವು ಮಾಡಬೇಕಾದ ಕೆಲಸವನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದರೂ ಸಹ ಅಬಕಾರಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಇನ್ನಷ್ಟು ಕುಟುಂಬಗಳು ನಾಶವಾಗಲಿವೆ. ಯುವಕರು, ವಿದ್ಯಾರ್ಥಿಗಳು ಮದ್ಯದ ಗೀಳಿಗೆ ಭವಿಷ್ಯವನ್ನೇ ಕಳೆದುಕೊಳ್ಳುವ ಆತಂಕವಿದೆ.ತಾಲೂಕಿನಲ್ಲಿ ಅನೇಕ ಕಡೆ ಗೋವಾ ರಾಜ್ಯದ ಮಧ್ಯ ಮಾರಾಟ ಮಾಡುತ್ತಿದ್ದರು ತಡೆಯಲು ಅಧಿಕಾರಿಗಳ ವಿಫಲವಾಗಿದ್ದಾರೆ ಎಂದು ದೂರಿದರು.