
ಹಾನಗಲ್: ತಾಲೂಕಿನ ಕೆಲ ಗ್ರಾಮಗಳಿಗೆ ಸ್ಮಶಾನಕ್ಕೆ ಜಿಲ್ಲಾಧಿಕಾರಿಗಳು ಭೂಮಿ ಮಂಜೂರಿ ಮಾಡಿದ್ದು, ಅಳತೆ ಕೈಗೊಂಡು, ಹದ್ದಬಸ್ತ ಮಾಡಿ ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿಕೊಡುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ತಹಶೀಲ್ದಾರ್ ರೇಣುಕಾ ಎಸ್. ಅವರಿಗೆ ಸೂಚಿಸಿದರು.
ತಹಶೀಲ್ದಾರ್ ಅವರೊಂದಿಗೆ ಸಭೆ ನಡೆಸಿದ ಅವರು, ಸ್ಮಶಾನಕ್ಕೆ ಭೂಮಿ ಇಲ್ಲದ ಕೆಲ
ಗ್ರಾಮಗಳಿಗೆ ಜಿಲ್ಲಾಧಿಕಾರಿಗಳಿಂದ ಭೂಮಿ ಮಂಜೂರಿ ಮಾಡಿಸಲಾಗಿದೆ. ಭೂಮಿ ಅಳತೆ ಕೈಗೊಂಡು ತಕ್ಷಣವೇ ಆಯಾ ಗ್ರಾಪಂಗಳಿಗೆ ಹಸ್ತಾಂತರಿರುವ ಪ್ರಕ್ರಿಯೆ ಆದಷ್ಟು ಬೇಗ ಪೂರ್ಣಗೊಳಿಸಿ. ಇನ್ನೂ ಕೆಲ
ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿ ಇಲ್ಲದೇ ತೊಂದರೆ ಉಂಟಾಗುತ್ತಿದ್ದು, ಅಂಥ ಗ್ರಾಮಗಳಲ್ಲಿ ಸರ್ಕಾರಿ ಭೂಮಿಯ ಲಭ್ಯತೆಯ ಕುರಿತು ಮಾಹಿತಿ ನೀಡಿ, ಭೂಮಿ ಲಭ್ಯ ಇರದ ಗ್ರಾಮಗಳಲ್ಲಿ ಪರ್ಯಾಯವಾಗಿ
ಖಾಸಗಿ ವ್ಯಕ್ತಿಗಳು ಭೂಮಿ ನೀಡಲು ಮುಂದೆ ಬಂದರೆ ಮಾಹಿತಿ ಪಡೆಯಿರಿ ಎಂದು ಸೂಚಿಸಿದರು.
ಕೆಲವೆಡೆ ಗ್ರಾಮ ಲೆಕ್ಕಾಧಿಕಾರಿಗಳು ವಾಸವಿದ್ದ ಮನೆಗಳಿಗೂ ವಾಸವಿಲ್ಲವೆಂದು ವರದಿ
ನೀಡುತ್ತಿರುವುದರಿಂದ ಅರ್ಹ ಸಂತ್ರಸ್ತರು ಮನೆ ಹಾನಿ ಪರಿಹಾರದಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು
ಅನೇಕ ದೂರುಗಳು ಕೇಳಿ ಬರುತ್ತಿದ್ದು, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಿ, ಯಾವುದೇ ಕಾರಣಕ್ಕೂ
ಅರ್ಹರಿಗೆ ಅನ್ಯಾಯವಾಗದಂತೆ ಗಮನ ಹರಿಸಿ ಎಂದರು.
ಪ್ರಸಕ್ತ ಸಾಲಿನ ಬೆಳೆ ಅಣೆವಾರಿ ಕಾರ್ಯ ರೈತರಿಗೆ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ನಿರ್ವಹಿಸಿ,ಹಾನಿಯಾದ ಬೆಳೆ ವಿವರ ಸಮರ್ಪಕವಾಗಿ ನೀಡುವಂತೆ ಸಂಬಂಧಪಟ್ಟ ಸಿಬ್ಬಂದಿಗೆ ಸೂಚಿಸಿ ಎಂದರು. ಭೂಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ ಡಿಜಿಟಲೀಕರಣ ಕಾರ್ಯದ ಪ್ರಗತಿಯಲ್ಲಿದ್ದು,19 ಲಕ್ಷ ಪುಟ ದಾಖಲೆಗಳನ್ನು ಅಪಲೋಡ್ ಮಾಡಲಾಗಿದ್ದು, ಇನ್ನುಳಿದ 17 ಲಕ್ಷ ಪುಟ ದಾಖಲೆಗಳನ್ನು ಅಪಲೋಡ್ ಮಾಡಬೇಕಿದೆ ಎಂದು ತಹಶೀಲ್ದಾರ್ ರೇಣುಕಾ ಎಸ್. ವಿವರ ನೀಡಿದರು.