DistrictHaveriLatestNews

ಜನಸ್ನೇಹಿ ಆಡಳಿತದಲ್ಲಿ ಹಾನಗಲ್ ತಾಲೂಕ ಮಾದರಿಯಾಗಬೇಕು: ಶಾಸಕ ಶ್ರೀನಿವಾಸ ‌ಮಾನೆ

ಹಾನಗಲ್: ಜನಸ್ನೇಹಿ ಆಡಳಿತದಲ್ಲಿ ಹಾನಗಲ್ ತಾಲೂಕು ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಗಮನ ನೀಡಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಬುಧವಾರ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ತಾಲೂಕಾಡಳಿತ ಆಯೋಜಿಸಿದ್ದ ತಾಲೂಕಾಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಬಳಿಕ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿದೆ. ಸ್ವತಃ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಪ್ರತಿ ತಿಂಗಳು ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದಾರೆ. ಪ್ರತಿ ತಾಲೂಕುಗಳಲ್ಲಿಯೂ ಸಹ ಕಾರ್ಯಕ್ರಮದ ಮೂಲಕ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ದೊರಕಿಸಲಾಗುತ್ತಿದೆ. ಇದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಹುಡುಕಿ ಜನ ಅಲೆದಾಡುವುದು ತಪ್ಪಿದೆ. ಜನತೆಯ ಅಪೇಕ್ಷೆಗೆ ತಕ್ಕಂತೆ ತಾಲೂಕಿನ ಆಡಳಿತ ವ್ಯವಸ್ಥೆಯನ್ನು ಚುರುಕಾಗಿಸಲಾಗಿದೆ. 40, 50 ವರ್ಷಗಳಿಂದ‌ ನೆನೆಗುದಿಗೆ ಬಿದ್ದಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ಕಂದಾಯ ಮತ್ತು ಉಪ ಗ್ರಾಮಗಳನ್ನು ರಚಿಸುವ ಮೂಲಕ ಸಾವಿರಾರು ಕುಟುಂಬಗಳಿಗೆ ಮನೆಯ ಮಾಲಿಕತ್ವ ನೀಡಲಾಗುತ್ತಿದೆ. ಕಂದಾಯ ದಾಖಲೆಗಳ ಡಿಜಿಟಲೀಕರಣ ನಡೆದಿದ್ದು, ಈಗಾಗಲೇ 22 ಲಕ್ಷ ಪುಟ ದಾಖಲೆಗಳನ್ನು ಅಪ್ಲೋಡ್ ಮಾಡಲಾಗಿದೆ ಎಂದು ತಿಳಿಸಿದರು.

ಹಾನಗಲ್ ತಾಲೂಕಿನ ಅನೇಕ ಪಹಣಿ ತಿದ್ದುಪಡಿ ಪ್ರಕರಣಗಳು ಸವಣೂರು ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಉಳಿಯುತ್ತಿವೆ. ಅಲ್ಲಿನ ಕೆಲಸ ಸಿಬ್ಬಂದಿ ಸ್ಪಂದನೆ ಸರಿ ಇಲ್ಲ. ಅಂಥವರಿಗೆ ಎಚ್ಚರಿಕೆ ನೀಡಿ ಬಾಕಿ ಪ್ರಕರಣ ತಕ್ಷಣ ಇತ್ಯರ್ಥ ಪಡಿಸಬೇಕು. ತಾಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಹೆಚ್ಚಿದೆ. ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ವಿಫಲರಾಗಿರುವ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ಕೇಂದ್ರೀಕೃತವಾಗಿದ್ದ ಆಡಳಿತ ವ್ಯವಸ್ಥೆ ಇದೀಗ ಜನರ ಮನೆ ಬಾಗಿಲಿಗೆ ಬಂದಿದೆ. ಜಾತಿ, ಆದಾಯ ಪ್ರಮಾಣ ಪತ್ರಕ್ಕೂ ಮೊದಲು ಅಲೆಯುವಂತಾಗಿತ್ತು. ಅದೀಗ ನಾಡಕಚೇರಿಯಲ್ಲಿ ಸಿಗುವಂತಾಗಿದೆ. ಅರ್ಹರಿಗೆ ಸರ್ಕಾರದ ಸೌಲಭ್ಯ ತಲುಪಿಸುವಲ್ಲಿ ಕೆಲ ಬಾರಿ ವಿಫಲರಾಗಿದ್ದೇವೆ ಎನ್ನುವ ಭಾವನೆ ಇದೆ. ಹಾಗಾಗಿ ಅಧಿಕಾರಿಗಳು ಕಾಳಜಿಯಿಂದ ಕೆಲಸ ಮಾಡಬೇಕಿದೆ. ಜನರನ್ನು ಅನವಶ್ಯಕವಾಗಿ ಅಲೆಯಿಸದೇ ಸ್ಪಂದಿಸಬೇಕಿದೆ‌ ಎಂದು ಹೇಳಿದ ಅವರು ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತಿಯಾಗಿರುವ ಎಲ್ಲ ಅರ್ಜಿಗಳನ್ನೂ ಗಣಕೀಕೃತಗೊಳಿಸಿ ವಿಲೇವಾರಿ ಮಾಡಲಾಗುವುದು. ಜೊತೆಗೆ ಸೂಕ್ತ ಹಿಂಬರಹ ನೀಡಲಾಗುವುದು. ಜಿಲ್ಲೆಯಲ್ಲಿ ನಡೆದ 11 ಜನಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟು 3150 ಅರ್ಜಿ ಸ್ವೀಕರಿಸಿ ಪರಿಹಾರ ದೊರಕಿಸುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

ಜಿಪಂ‌ ಸಿಇಒ ಅಕ್ಷಯ ಶ್ರೀಧರ್, ಉಪ ಕಾರ್ಯದರ್ಶಿ ಡಾ.ಎಸ್.ರಂಗಸ್ವಾಮಿ, ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ಸವಣೂರು ಉಪ ವಿಭಾಗಾಧಿಕಾರಿ ಮಹ್ಮದ್ ಖಿಜರ್, ತಹಶೀಲ್ದಾರ್ ರೇಣುಕಾ ಎಸ್., ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಮಾಳಾಪುರ, ಉಪಾಧ್ಯಕ್ಷೆ ನನ್ನಿಮಾ ನಾಸಿಪುಡಿ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial