ಹಾನಗಲ್: ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಲಭ್ಯವಿರುವ ಗಾಂವಠಾಣ ಜಮೀನು ಗುರುತಿಸಿ, ಸರ್ವೆ ಕಾರ್ಯ ಕೈಗೊಳ್ಳಲು ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.
ಪುರಸಭೆಯಲ್ಲಿ ಮಂಗಳವಾರ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಅವರು ಸೂಚಿಸಿದರು.
ಕಾಮನಹಳ್ಳಿ ಮತ್ತು ಬೈಚವಳ್ಳಿ ರಸ್ತೆ ಹಾಗೂ ತಾಲೂಕಾ ಕ್ರೀಡಾಂಗಣದ ಪಕ್ಕದಲ್ಲಿ ಲಭ್ಯವಿರುವ ಜಮೀನಿನ ಸರ್ವೆ ಕೈಗೊಳ್ಳಬೇಕು. ಕೆ.ಎಚ್.ಬಿ. ಅಥವಾ ಯಾವುದಾದರೂ ಇಲಾಖೆಗೆ ವಸತಿ ಯೋಜನೆಗಾಗಿ ವಿನ್ಯಾಸ ತಯಾರಿಸಲು ಸಭೆ ತೀರ್ಮಾನಿಸಿತು. ಮುಂದಿನ ಸಭೆಯೊಳಗೆ ಸರ್ವೆ ಕೈಗೊಂಡು ಅಗತ್ಯ ಮಾಹಿತಿ ಸಿದ್ಧಪಡಿಸುವಂತೆ ಶಾಸಕ ಮಾನೆ ಇದೇ ಸಂದರ್ಭದಲ್ಲಿ ಪ್ರಭಾರ ಮುಖ್ಯಾಧಿಕಾರಿ ಎನ್.ಎಸ್.ನಾಗನೂರ ಅವರಿಗೆ ಸೂಚಿಸಿದರು.
ನಿವೇಶನ ರಹಿತ 7 ಜನ ಪೌರಕಾರ್ಮಿಕರಿಗೆ ನವನಗರದ ರಿ.ಸ.ನಂ. 283/1 ಹಾಗೂ 283/3 ರಲ್ಲಿ ನಿವೇಶನ ಗುರುತಿಸಿ ಹಂಚಿಕೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ವಿವಿಧ ವಸತಿ ಯೋಜನೆಗಳ ಪ್ರಗತಿಯನ್ನು ಶ್ರೀನಿವಾಸ ಮಾನೆ ಪರಿಶೀಲಿಸಿದರು.
ತಹಶೀಲ್ದಾರ್ ರೇಣುಕಾ ಎಸ್., ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಆಶ್ರಯ ಸಮಿತಿ ಸದಸ್ಯರಾದ ಮೇಘನಾ ಸುಲಾಖೆ, ನಿಯಾಜ್ ಸರ್ವಿಕೇರಿ, ವಿನಾಯಕ ಬಂಕನಾಳ, ಮಾಲತೇಶ ಕಾಳೇರ ಇದ್ದರು.