DistrictHaveriLatest

ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ: ಅಧಿಕಾರಿಗಳ ತರಾಟೆ ತೆಗೆದುಕೊಂಡ ಸಚಿವ ಶಿವಾನಂದ ಪಾಟೀಲ

ಹಾನಗಲ್: ತಾಲೂಕಿನ ಕೂಡಲ ಮತ್ತು ನಾಗನೂರು ಮಧ್ಯೆ ವರದಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿಯನ್ನು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮತ್ತು ಶಾಸಕ ಶ್ರೀನಿವಾಸ ಮಾನೆ ವೀಕ್ಷಿಸಿ, ಕಾಮಗಾರಿ ವಿಳಂಬಕ್ಕೆ ಕೆ.ಆರ್.ಡಿ.ಸಿ.ಎಲ್. ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಶಿರಶ್ಯಾಡ ಅವರನ್ನು ತರಾಟೆಗೆ ತೆಗೆದುಕೊಂಡರು.

ಕಾಮಗಾರಿ ಗುತ್ತಿಗೆ ಅವಧಿ ಮುಗಿದು ಹಲವು ವರ್ಷಗಳೇ ಗತಿಸಿದ್ದರೂ ಕೂಡ ಸೇತುವೆ ನಿರ್ಮಾಣ ಪೂರ್ಣಗೊಳ್ಳದೇ ಕುಂಟುತ್ತಾ ಸಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರತಿ ಮಳೆಗಾಲದಲ್ಲಿಯೂ ಸಹ ಸುತ್ತಲಿನ ಗ್ರಾಮಸ್ಥರು ಅಕ್ಕಪಕ್ಕದ ಗ್ರಾಮಗಳಿಗೆ ಹಾಗೂ ತಮ್ಮ ಹೊಲಗದ್ದೆಗಳಿಗೆ ತೆರಳಲು ಹತ್ತಾರು ಕಿ.ಮೀ. ಸುತ್ತಾಡಬೇಕಿದೆ. ಕಾಮಗಾರಿ ತ್ವರಿತವಾಗಿ ಕೈಗೊಂಡು ಆದಷ್ಟು ಬೇಗ ಮುಗಿಸುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಸೇತುವೆಯ ಮುಂದುವರೆದ ಕಾಮಗಾರಿ ಕೈಗೊಳ್ಳಲು ವಿಸ್ತೃತ ವರದಿ ಸಲ್ಲಿಸಿ ಎಂದು ಸೂಚನೆ ನೀಡಿದರು. ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕರಣಗಳನ್ನು ಬೇಗ ಇತ್ಯರ್ಥ ಪಡಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಸವಣೂರು ಉಪ ವಿಭಾಗಾಧಿಕಾರಿ ಮಹ್ಮದ್ ಖಿಜರ್ ಅವರಿಗೆ ಸೂಚಿಸಿದರು.

ಬಳಿಕ ಬಾಳಂಬೀಡ ಗ್ರಾಮದಲ್ಲಿ ವರದಾ ನದಿ ಹಿನ್ನೀರು ನುಗ್ಗುತ್ತಿರುವ ಕೃಷಿ ಭೂಮಿಯನ್ನು ಸಚಿವ ಶಿವಾನಂದ ಪಾಟೀಲ, ಶಾಸಕ ಶ್ರೀನಿವಾಸ ಮಾನೆ ವೀಕ್ಷಣೆ ಮಾಡಿದರು. ವರದಾ ನದಿ ಹಿನ್ನೀರಿನಿಂದ 77 ಹೆಕ್ಟೇರ್ ಕೃಷಿಭೂಮಿಗೆ ನೀರು ನುಗ್ಗುತ್ತಿದೆ ಎಂದು ರೈತರು ಗಮನ ಸೆಳೆದಾಗ ವರದಾ ನದಿಗೆ ತಡೆಗೋಡೆ ನಿರ್ಮಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಎಇಇ ಪ್ರಹ್ಲಾದ್ ಶೆಟ್ಟಿ ಅವರಿಗೆ ಸೂಚಿಸಿದರು.

ಜಿಪಂ ಸಿಇಒ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ತಹಶೀಲ್ದಾರ್ ರೇಣುಕಾ ಎಸ್., ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಮುಖಂಡರಾದ ಆನಂದಸ್ವಾಮಿ ಗಡ್ಡದೇವರಮಠ, ಟಾಕನಗೌಡ ಪಾಟೀಲ, ಮಂಜು ಗೊರಣ್ಣನವರ, ವಿಜಯಕುಮಾರ ದೊಡ್ಡಮನಿ ಸೇರಿದಂತೆ ಹಲವು ಮುಖಂಡರು, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial