ಹಾನಗಲ್: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಅಂಜುಮನ್ ಎ ಇಸ್ಲಾಂ ಸುನ್ನಿ ಹನಫಿ ಸಂಸ್ಥೆ ಅಕ್ಕಿ-ಆಲೂರ ಇದರ ಪದಾಧಿಕಾರಿಗಳು ಲೋಕ ಸಭೆಯ ಜಂಟಿ ಸದನ ಸಮಿತಿಯ ಕಾರ್ಯದರ್ಶಿಗೆ ಸವಣೂರ ಉಪ ವಿಭಾಗಾಧಿಕಾರಿ ಮಹ್ಮದ ಖಿಜರ್ ಅವರ ಮೂಲಕ ಮನವಿ ಸಲ್ಲಿಸಿದರು.
ವಕ್ಫ ಎಂಬುದು ಇಸ್ಲಾಂ ಧರ್ಮದ ವಿಶಿಷ್ಟವಾದ ದತ್ತಿ ವ್ಯವಸ್ಥೆಯಲ್ಲಿ ಒಂದಾಗಿದೆ.ಈ ಮಸೂದೆಯನ್ನು ಈಚೆಗೆ ಮುಕ್ತಾಯಗೊಂಡ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗಿದೆ.ಈಗ ಮಸೂದೆಯನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಲಾಗಿದೆ.ಈ ಮಸೂದೆಯು ಅಸಂವೈಧಾನಿಕ,ಅಲ್ಪಸಂಖ್ಯಾತ ಸಮುದಾಯದ ವಿರೋಧಿ ಹಾಗೂ ವಿಭಜನಾಕಾರಿಯಾಗಿದೆ ಎಂದು ಅಂಜುಮನ್ ಸಂಸ್ಥೆ ಕಾರ್ಯದರ್ಶಿ ಯಾಸೀರ ಅರಾಫತ್ ಮಕಾನದಾರ ಮನವಿಯಲ್ಲಿ ಟೀಕಿಸಿದ್ದಾರೆ. ಮುಸ್ಲಿಂ ಧರ್ಮದ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ವಕ್ಫಗೆ ಬಹಳ ಮುಖ್ಯವಾದ ಪಾತ್ರವಿದೆ. ವಕ್ಫ ಎಂದರೆ ಮುಸ್ಲಮರು ಧಾರ್ಮಿಕ ಹಾಗೂ ದತ್ತಿ ಉದ್ದೇಶಕ್ಕಾಗಿ ನೀಡಿರುವ ಆಸ್ತಿಗಳಾಗಿವೆ.ಈ ತಿದ್ದುಪಡಿ ಮಸೂದೆಯ ಮೂಲಕ ಕೇಂದ್ರ ಸರ್ಕಾರ ಈ ಆಸ್ತಿಗಳ ವ್ಯವಸ್ಥಾಪನೆಯಲ್ಲಿ ಅನಗತ್ಯ ರಾಜಕಾರಣ ಮಾಡಲು ಪ್ರಯತ್ನಿಸುತ್ತಿದೆ. ಒಂದು ವೇಳೆ ಮಸೂದೆಯಲ್ಲಿರುವ ತಿದ್ದುಪಡಿಗಳು ಕಾನೂನಾಗಿ ರೂಪ ಪಡೆದು ಜಾರಿಗೆ ಬಂದಲ್ಲಿ ವಕ್ಫ ಮಂಡಳಿಗಳ ಬಹುತೇಕ ಅಧಿಕಾರ ಇನ್ನಿಲ್ಲದಂತಾಗುತ್ತದೆ.ಆದ್ದರಿಂದ ಅಲ್ಪಸಂಖ್ಯಾತ ಮುಸ್ಲಿಂ ಧರ್ಮದ ಹಿತಾಸಕ್ತಿಗೆ ವಿರುದ್ಧವಾಗಿರುವ ವಕ್ಫ ಕಾನೂನನ್ನು ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಬಾರದೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಂಜುಮನ್ ಸಂಸ್ಥೆ ಅಧ್ಯಕ್ಷ ಮೆಹಬೂಬ ಅಲಿ ಬ್ಯಾಡಗಿ,ಕಾರ್ಯದರ್ಶಿ ಯಾಸೀರ ಅರಾಫತ್ ಮಕಾನದಾರ,ನಿರ್ದೇಶಕರಾದ ಇಮ್ತಿಯಾಜ ಸಿಲಾರ,ಅಲ್ತಾಫ ಅತ್ತಾರ,ಸುಲೇಮಾನ ಶೇಖ ಮುಂತಾದವರು ಹಾಜರಿದ್ದರು.