ಹಾನಗಲ್ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಿಗೆ ತೆರಳಲು ತೊಂದರೆ
ಉಂಟಾಗದಂತ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು. ಕೆಲ ಮಾರ್ಗಗಳಲ್ಲಿ ಸಂಚರಿಸುವ ಬಸ್ಸುಗಳಿಂದ
ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತಿಲ್ಲ. ಅಂಥ ಮಾರ್ಗಗಳನ್ನು ಮಾರ್ಪಡಿಸಿ ವಿದ್ಯಾರ್ಥಿಗಳಿಗೆ
ಅನುಕೂಲ ಮಾಡಿಕೊಡಿ ಎಂದು ಶಾಸಕ ಶ್ರೀ ನಿವಾಸ ಮಾನೆ ಅವರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ
ಸೂಚಿಸಿದರು.ಇಲ್ಲಿ ತಾಲೂಕಿನ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೆಲವು ಗ್ರಾಮಗಳಿಗೆ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದೇ ಗ್ರಾಮಸ್ಥರಿಗೆ ತೊಂದರೆ ಉಂಟಾಗಿರುವ ಬಗ್ಗೆ
ದೂರುಗಳಿವೆ. ಎಲ್ಲೆಲ್ಲಿ ಸಮಸ್ಯೆಗಳಿವೆ ಎನ್ನುವುದನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರಿಗೆ
ಸಂಸ್ಥೆಯ ಸಿಬ್ಬಂದಿ ಸಾರ್ವಜನಿಕರು, ವಿದ್ಯಾರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ದೂರು ಕೇಳಿ ಬರುತ್ತಿರುವ ಸಿಬ್ಬಂದಿಗೆ ಸೂಕ್ತ ತಿಳುವಳಿಕೆ ನೀಡಿ, ಎಚ್ಚರಿಸಿ, ದೂರುಗಳಿಗೆ ಆಸ್ಪದ ನೀಡದೇ ಸಾರ್ವಜನಿಕ ಸ್ನೇಹಿ ಸೇವೆಗೆ ಗಮನ ನೀಡಿ ಎಂದು ಸೂಚಿಸಿದರು. ತಾಲೂಕಿಗೆ ಸುಗಮ ಸಂಚಾರದ ನಿಟ್ಟಿನಲ್ಲಿ ಈಗಾಗಲೇ ಎಂಟು ಹೊಸ ಬಸ್ಸುಗಳನ್ನು ಒದಗಿಸಿದ್ದು, ಹೆಚ್ಚುವರಿಯಾಗಿ ಇನ್ನಷ್ಟು ಬಸ್ಸುಗಳನ್ನು ಪೂರೈಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ
ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡಿ ಅವರ ಗಮನ ಸೆಳೆಯುವುದಾಗಿ ಇದೇ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಕೆಎಸ್ ಆರ್‌ಟಿಸಿ ಘಟಕದ ಪ್ರಭಾರ ವ್ಯವಸ್ಥಾಪಕ ಎನ್.ಬಿ.ಚವ್ಹಾಣ, ಸಾರಿಗೆ ನಿಯಂತ್ರಕರಾದ ಆರ್.ಬಿ.ಸಕ್ಸ್ . ಖಾನ್, ಎಸ್.ಎಫ್.ಮಡಿವಾಳರ ಹಾಜರಿದ್ದರು.