
ಹಾನಗಲ್: ಹಾನಗಲ್ ಪುರಸಭೆ ಮಳಿಗೆ ಹರಾಜಿನಲ್ಲಿ ಗೋಲಮಾಲ್ ಆಗಿದ್ದು, ಇದರಿಂದ ಸರಕಾರಕ್ಕೆ ಸುಮಾರು 2.5 ಕೋಟಿ ರೂಗಳಷ್ಟು ನಷ್ಟವಾಗಿದೆ ಎಂದು ಪುರಸಭೆ ಸದಸ್ಯ ಜಮೀರ್ ಶೆಖ್ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿ ಅವರು ಮಾತನಾಡಿ,ಹಾನಗಲ್ಲ ಪುರಸಭೆಯ ಆವರಣದಲ್ಲಿ 14-06-2019 ರಂದು ಮುಖ್ಯಾಧಿಕಾರಿ ಮತ್ತು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಅಂಗಡಿಗಳ ಹರಾಜು ಪ್ರಕ್ರಿಯೆ ನಡೆಯಿತು. ಈ ಪ್ರಕ್ರಿಯೆಯಲ್ಲಿ 59 ಅಂಗಡಿಗಳು ಯಶಸ್ವಿಯಾಗಿ ಹರಾಜು ಪ್ರಕ್ರಿಯೆ ಪೂರೈಸಿದ್ದು, ಅನುಮೋದನೆಗಾಗಿ ಪ್ರಸ್ತಾವವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲು ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ, ಈ ಸಂಬಂಧ ಪುರಸಭೆಯಿಂದ ಯಾವುದೇ ಸ್ಪಷ್ಟ ಮಾಹಿತಿಯಿಲ್ಲ. ಅನುಮೋದನೆಗಾಗಿ ಪಟ್ಟಿಯನ್ನು ಕಳುಹಿಸಿದ್ದಾರೆಯೇ ಅಥವಾ ಕಳುಹಿಸಿದ ಪಟ್ಟಿ ಜಿಲ್ಲಾಧಿಕಾರಿಗಳಿಂದ ವಿಳಂಬವಾಗಿದೆಯೇ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದು ದೂರಿದರು.
ಹರಾಜು ಪ್ರಕ್ರಿಯೆಯ ನಂತರ, ಯಶಸ್ವಿ ಬಿಡುದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಬಾಡಿಗೆ ಕರಾರು ಮಾಡಿಕೊಡಬೇಕಾಗಿತ್ತು. ಆದರೆ 53 ತಿಂಗಳ ಕಾಲ ಪುರಸಭೆ ಅಥವಾ ಜಿಲ್ಲಾಧಿಕಾರಿಗಳಿಂದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ವಿಳಂಬದಿಂದಾಗಿ 2019ರ ಜೂನ್ 13 ರಿಂದ 2024ರ ಜನವರಿವರೆಗೆ ಪುರಸಭೆಯ ಬೊಕ್ಕಸಕ್ಕೆ 2.5 ಕೋಟಿ ನಷ್ಟ ಉಂಟಾಗಿದೆ.
ಈ ಅಸಡ್ಡೆಗಾಗಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು ಹಾಗೂ ನಷ್ಟದ ಲೆಕ್ಕಪತ್ರ ಪರಿಶೀಲಿಸಲು ಸರಕಾರ ತುರ್ತು ಕ್ರಮ ಕೈಗೊಳ್ಳಬೇಕು. ಮುಂದೆ ಹರಾಜು ಪ್ರಕ್ರಿಯೆ ಪಾರದರ್ಶಕವಾಗಲು ಸರಕಾರ ಕ್ರಮ ವಹಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಮತ್ತು ತೀರ್ಮಾನಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಹರಾಜಿನಲ್ಲಿ ಯಾವುದೇ ರೀತಿಯ ನಿರ್ವಹಣೆ ಇಲ್ಲ, ಮಳಿಗೆಗಳಿಗೆ ನಿರ್ವಹಣೆ ಸಂಬಂಧಿತ ಯಾವುದೇ ಕಾರ್ಯಗಳನ್ನು ಮಾಡಲಾಗಿಲ್ಲ.
ಮಳಿಗೆ ಪಡೆದವರಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಮಳಿಗೆ ಮಾಲೀಕರು ಮತ್ತು ಗ್ರಾಹಕರಿಗಾಗಿ ಶೌಚಾಲಯ ವ್ಯವಸ್ಥೆಯ ಕೊರತೆ ಇದೆ. ಮಳಿಗೆಗಳಿಗೆ ಈವರೆಗೆ ಬಣ್ಣ ಹಚ್ಚಿಲ್ಲ, ನೀರಿನ ವ್ಯವಸ್ಥೆ ಇಲ್ಲ.ಮಳಿಗೆಗಳಿಗೆ ಬಣ್ಣ ಹಚ್ಚುವ ಕಾರ್ಯ ಅಥವಾ ನೀರಿನ ಸರಬರಾಜು ವ್ಯವಸ್ಥೆಯನ್ನು ಸ್ಥಾಪಿಸಿಲ್ಲ. ಕಸದ ವಿಲೇವಾರಿ ಪಾಯಿಂಟ್ ಇಲ್ಲ.ಮಳಿಗೆಗಳಲ್ಲಿ ಕಸ ವಿಲೇವಾರಿ ಮಾಡಲು ಸೂಕ್ತ ಸ್ಥಳವಿಲ್ಲ, ಇದರಿಂದ ಕಸ ರಸ್ತೆಗೆ ಹರಿದು ಬೀಳುತ್ತಿದೆ.ಅಧಿಕೃತವಾಗಿ ಬಾಕಿ ನೋಟಿಸ್ ನೀಡಿಲ್ಲ.ಈವರೆಗೆ ಯಾರಿಗೂ ಬಾಕಿ ಪಾವತಿಗಾಗಿ ಅಧಿಕೃತ ನೋಟಿಸ್ ನೀಡಿರುವುದಿಲ್ಲ.2 ಕೋಟಿ ರೂಪಾಯಿಗಳು ಬಾಕಿಯಾಗಿರುವುದರ ಕುರಿತು ಸ್ಪಷ್ಟನೆ ನೀಡಿಲ್ಲ ಎಂದರು.