ಪಂಚಾಯತಿಗೊಂದು ಮದ್ಯದಂಗಡಿ ಚಿಂತನೆ: ರಾಜ್ಯ ಸರ್ಕಾರದ ವಿರುದ್ಧ ಮಹಿಳೆಯರ ಅಹೋರಾತ್ರಿ ಧರಣಿ
ಬಾಗಲಕೋಟೆ: ಪಂಚಾಯಿತಿಗೊಂದು ಮದ್ಯದಂಗಡಿ ತೆರೆಯಬೇಕು ಎಂಬ ಸರ್ಕಾರದ ಚಿಂತನೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದ್ದು, ಇದೀಗ ನೂರಾರು ಮಹಿಳೆಯರು ಇದನ್ನು ವಿರೋಧಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಈ ಪ್ರತಿಭಟನೆ ನಡೆದಿದೆ. ಮದ್ಯ ನಿಷೇಧ ಆಂದೋಲನ ಕರ್ನಾಟಕ, ರಾಜ್ಯ ಮಹಿಳಾ ಒಕ್ಕೂಟ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಮಹಿಳೆಯರು ನಿನ್ನೆ ಬೆಳಗ್ಗೆಯಿಂದ ಇಂದು ಬೆಳಗಿನವರೆಗೂ ಧರಣಿ ನಡೆಸಿದ್ದಾರೆ. ರಾಜ್ಯದಲ್ಲಿ ಪಂಚಾಯಿತಿಗೊಂದು ಮದ್ಯದಂಗಡಿ ತೆರೆಯುವ ಚಿಂತನೆ ನಡೆಸಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರ ಹಾಗೂ ಅಬಕಾರಿ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಬಕಾರಿ ಸಚಿವರಾಗಿ ಆರ್.ಬಿ. ತಿಮ್ಮಾಪುರ ಉಸ್ತುವಾರಿ ಇರುವ ಬಾಗಲಕೋಟೆಯಲ್ಲಿ ನಾರಿಯರು ಈ ಧರಣಿ ನಡೆಸಿರುವುದು ಇದು ವಿಶೇಷ. ಪ್ರತಿಭಟನಾ ಸ್ಥಳಕ್ಕೆ ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ಮಾಡಿದ್ದರು.
ಸಾರಾಯಿಯಿಂದ ಸಂಸಾರ ಜೀವನ ಹಾಳಾಗುತ್ತಿದೆ. ಸಣ್ಣಪುಟ್ಟ ವ್ಯಾಜ್ಯಗಳಾಗುತ್ತಿವೆ. ಯಾವುದೇ ಪರಿಸ್ಥಿತಿಯಲ್ಲಿ ಸಾರಾಯಿ ಬಂದ್ ಮಾಡಬೇಕು. ಈ ಬಗ್ಗೆ ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಮಾನ್ಯ ಅಬಕಾರಿ ಮಂತ್ರಿಗಳು, ಮುಖ್ಯಮಂತ್ರಿಗಳಿಗೂ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು. ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಭೇಟಿ ನೀಡಿ ಮನವಿ ಸ್ವೀಕರಿಸಿದರು