ವಿದೇಶಿ ಯೂಟ್ಯೂಬರ್ ಮೇಲೆ ಕೇಸ್ ದಾಖಲಿಸಲು ಮುಂದಾದ ಬಿಎಂಆರ್‌ಸಿಎಲ್!!
ಬೆಂಗಳೂರು: ಯೂಟ್ಯೂಬರ್ ಮತ್ತು ಸಾಮಾಜಿಕ ಮಾಧ್ಯಮದ ಕಾಮಿಡಿ ಸ್ಟಾರ್ ಫಿಡಿಯಾಸ್ ಪನಾಯೊಟೌ ಅವರು ಇತ್ತೀಚೆಗೆ ಯಾವುದೇ ಟಿಕೆಟ್ ಅಥವಾ ಮೆಟ್ರೋ ಕಾರ್ಡ್ ಇಲ್ಲದೆ ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಹಾಗೂ ಉಚಿತ ಮೆಟ್ರೋ ಪ್ರಯಾಣ ಮಾಡುವುದು ಹೇಗೆ ಎಂಬ ಬಗ್ಗೆ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಇವರ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್‌ಸಿಎಲ್, ಯೂಟ್ಯೂಬರ್ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವುದಾಗಿ ಹೇಳಿದೆ.
2.26 ಮಿಲಿಯನ್ ಚಂದಾದಾರರನ್ನು ಹೊಂದಿರುವ ಫಿಡಿಯಾಸ್ ಪನಾಯೊಟೌ ಅವರು, ಭಾರತದಲ್ಲಿ ಮೆಟ್ರೋವನ್ನು ಉಚಿತವಾಗಿ ಪಡೆಯುವುದು ಹೇಗೆ ಎಂದು ನಾನು ನಿಮಗೆ ಕಲಿಸುತ್ತೇನೆಂದು ವಿಡಿಯೋ ಮಾಡಿದ್ದಾರೆ. ಮೆಟ್ರೋ ಎಂಟ್ರಿ ಗೇಟ್ ಓಪನ್ ಆಗಲು ಯಾವುದೇ ಕಾರ್ಡ್ ಬಳಸದೆ ಅಥವಾ ಕಾಯಿನ್ ಇಲ್ಲದೆ ಗೇಟ್ ಅನ್ನು ಜಿಗಿದು ಪ್ಲಾಟ್‌ಫಾರ್ಮ್‌ಗೆ ಪ್ರವೇಶ ಮಾಡಿದ್ದಾರೆ. ಇದೆಲ್ಲವನ್ನು ವಿಡಿಯೋ ಮಾಡಿ ‘ಭಾರತೀಯ ಮೆಟ್ರೋಲ್ಲಿ ಹೇಗೆ ನುಸುಳುವುದು’ ಎಂಬ ಶೀರ್ಷಿಕೆಯಡಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಪ್ರತಿಕ್ರಿಯೆ ನೀಡಿದ್ದು, ಒಬ್ಬ ವ್ಯಕ್ತಿಯು ಟಿಕೆಟ್ ಇಲ್ಲದೆ ಪ್ಲಾಟ್‌ಫಾರ್ಮ್‌ಗೆ ಪ್ರವೇಶಿಸಿ ಮೆಟ್ರೋದಲ್ಲಿ ಪ್ರಯಾಣಿಸುವ ವಿಡಿಯೋವನ್ನು ನಾನು ನೋಡಿದ್ದೇನೆ. ಅಂತಹ ನಡವಳಿಕೆಯು ಸ್ವೀಕಾರಾರ್ಹವಲ್ಲ. ಆ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಾನು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ವಿಡಿಯೋ ಕ್ಲಿಪ್‌ನಲ್ಲಿ ಫಿಡಿಯಾಸ್ ಪ್ರಯಾಣಿಕರು ಪ್ಲಾಟ್‌ಫಾರ್ಮ್‌ಗೆ ಪ್ರವೇಶ ಪಡೆಯುವ ಮೊದಲು ಮತ್ತು ನಿಲ್ದಾಣದಿಂದ ನಿರ್ಗಮಿಸುವ ಮೊದಲು ತೆರವುಗೊಳಿಸಬೇಕಾದ ಗೇಟ್ ಅನ್ನು ಜಿಗಿಯುವುದನ್ನು ಕಾಣಬಹುದು. ಸ್ಮಾರ್ಟ್‌ಕಾರ್ಡ್ ಅಥವಾ ಟೋಕನ್ ಅನ್ನು ಟ್ಯಾಪ್ ಮಾಡದೆ ಪ್ರಯಾಣಿಸಿದ್ದಾರೆ.