
ಹಾವೇರಿ: ಭೀಕರ ರಸ್ತೆ ಅಪಘಾತದಲ್ಲಿ ರಾಣೆಬೇನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಮೃತ ಪಟ್ಟಿದ್ದಾರೆ.

ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಗುಡಗೂರು ಕ್ರಾಸ್ ಮಂಗಳವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹನುಮನಮಟ್ಟಿ ಕೃಷಿ ವಿವಿಯ ಮೂವರು ವಿದ್ಯಾರ್ಥಿಗಳು ಮೃತ ಪಟ್ಟ ದುರ್ಘಟನೆ ನಡೆದಿದೆ.ಗೂಡಗೂರು ಬಳಿ ಮೈಲಾರ ಜಾತ್ರೆಗೆ ಹೊರಟಿದ್ದ ಎತ್ತಿನ ಬಂಡಿಗೆ ಪಲ್ಸರ್ ಬೈಕ್ ಡಿಕ್ಕಿಯಾಗಿ ಮೂವರು ಕೃಷಿ ಪದವಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಈ ಮೂವರಲ್ಲಿ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಶಶಿಕುಮಾರ ಹುಲಗಪ್ಪ ಉಪ್ಪಾರ(25), ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಗೋಡಿಹಾಳ ಗ್ರಾಮದ ಆಕಾಶ ಮಲಕಪ್ಪ ಬೀರಾದಾರ(23) ಹಾಗೂ ಬೀದರ್ ಜಿಲ್ಲೆಯ ಜೋಜಾನ ಗ್ರಾಮದ ದರ್ಶನ(23) ಮೃತಪಟ್ಟ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.
ಮೂವರು ವಿದ್ಯಾರ್ಥಿಗಳು ತಡರಾತ್ರಿ ಗುತ್ತಲ ಗ್ರಾಮದಿಂದ ಕೃಷಿ ವಿವಿಗೆ ಪಲ್ಸರ್ ಬೈಕಿನಲ್ಲಿ ಮರಳುವಾಗ ಯಾವುದೋ ಎತ್ತಿನಗಾಡಿಗೆ ಡಿಕ್ಕಿಯಾಗಿದೆ. ಈ ಹಿನ್ನೆಲೆ ಡಿಕ್ಕಿ ರಭಸಕ್ಕೆ ವಿದ್ಯಾರ್ಥಿಗಳು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಸ್ಥಳಕ್ಕೆ ರಾಣೆಬೇನ್ನೂರು ಗ್ರಾಮೀಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.