ನವದೆಹಲಿ: 2023ರ ಐಸಿಸಿ ವಿಶ್ವಕಪ್ ಕೊನೇ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇನ್ನೇನು ಈ ಭಾನುವಾರ ಗುಜರಾತ್ ರಾಜಧಾನಿ ಅಹಮದಾಬಾದ್‌ನ ‘ನರೇಂದ್ರ ಮೋದಿ’ ಸ್ಟೇಡಿಯಂನಲ್ಲಿ 2023ರ ಐಸಿಸಿ ವಿಶ್ವಕಪ್ ಫೈನಲ್ ಮ್ಯಾಚ್ ನಡೆಯುತ್ತೆ. ಹೀಗಾಗಿ ಪಂದ್ಯ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಕೂಡ ಬರ್ತಿದ್ದಾರಂತೆ. ಇದೇ ಭಾನುವಾರ ಅಂದ್ರೆ ನವೆಂಬರ್ 19ರಂದು 2023ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಹೀಗಾಗಿ ಗಣ್ಯ ವ್ಯಕ್ತಿಗಳಿಗು ಈಗಾಗಲೇ ಆಹ್ವಾನ ನೀಡಲಾಗಿದೆ. ಈಗ ದೇಶದ ಮುಖ್ಯಸ್ಥರಾದ ಪ್ರಧಾನಿ ಮೋದಿ ಅವರನ್ನ ವಿಶೇಷವಾಗಿ ಆಹ್ವಾನಿಸಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪಿಎಂ ಮೋದಿ ಅವ್ರು ನವೆಂಬರ್ 19ಕ್ಕೆ ಅಹಮದಾಬಾದ್‌ನ ‘ನರೇಂದ್ರ ಮೋದಿ’ ಕ್ರೀಡಾಂಗಣಕ್ಕೆ ಬಂದು, ಭಾರತ ತಂಡದ ಬೆನ್ನುತಟ್ಟುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಅಗತ್ಯವಿರುವ ಎಲ್ಲಾ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ.
ಏಕದಿನ ವಿಶ್ವಕಪ್ 2023ರ ಟೂರ್ನಿ ಲೀಗ್ ಹಂತದಲ್ಲಿ ಭಾರತ ಒಟ್ಟು 9 ಪಂದ್ಯ ಆಡಿದೆ. ಹೀಗೆ 9ಕ್ಕೆ 9 ಪಂದ್ಯ ಗೆದ್ದು ಬೀಗಿದೆ. ಈ ಮೂಲಕ 9 ಪಂದ್ಯದಲ್ಲಿ ಗೆದ್ದು 18 ಅಂಕ ಗಳಿಸಿದೆ. ಹಾಗೇ +2.57 ರನ್‌ರೇಟ್ ಮೂಲಕ ಮತ್ತೊಂದು ದಾಖಲೆ ಬರೆದಿದೆ. ಆಸ್ಟ್ರೇಲಿಯಾ ತಂಡದ ವಿರುದ್ಧ ಮೊದಲ ಪಂದ್ಯ ಆಡಿದ್ದ ಭಾರತ ತಂಡ 6 ವಿಕೆಟ್ ಭರ್ಜರಿ ಜಯ ದಾಖಲಿಸಿತ್ತು. ಹೀಗೆ ಭಾರತ ತಂಡ ತನ್ನ ಗೆಲುವಿನ ಓಟ ಮುಂದುವರಿಸಿತ್ತು. 2ನೇ ಪಂದ್ಯದಲ್ಲೂ, ಅಫ್ಘಾನಿಸ್ತಾನ ತಂಡದ ವಿರುದ್ಧ 8 ವಿಕೆಟ್ ಗೆಲುವು ದಾಖಲಿಸಿತ್ತು ಭಾರತ ತಂಡ.
ಭಾರತ ಏಕದಿನ ವಿಶ್ವಕಪ್ 2023ರ ಟೂರ್ನಿಯ 3ನೇ ಪಂದ್ಯದಲ್ಲಿ, ಪಾಕಿಸ್ತಾನ ವಿರುದ್ಧ ಪಂದ್ಯ ಆಡಿತ್ತು. ಈ ಮ್ಯಾಚ್‌ನಲ್ಲಿ ಕೂಡ ಭರ್ಜರಿ ಗೆಲುವು ದಾಖಲಿಸಿದ್ದ ರೊಹಿತ್ ನೇತೃತ್ವದ ಭಾರತ ತಂಡ 7 ವಿಕೆಟ್ ಅಂತರದ ಗೆಲುವು ಕಂಡಿತ್ತು. 4ನೇ ಪಂದ್ಯದಲ್ಲಿ ಬಾಂಗ್ಲಾದೇಶ 7 ವಿಕೆಟ್‌ಗಳ ಅಂತರದಲ್ಲಿ ಸೋತಿತ್ತು. ನ್ಯೂಜಿಲೆಂಡ್ ವಿರುದ್ಧ ಭರ್ಜರಿ 4 ವಿಕೆಟ್‌ನ ಗೆಲುವು ದಾಖಲಿಸಿದ್ದ ಭಾರತ ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಅಂತರದಲ್ಲಿ ಗೆದ್ದು ಬೀಗಿತ್ತು. ಶ್ರೀಲಂಕಾ ವಿರುದ್ಧ 302 ರನ್ ಅಂತರದ ಗೆಲುವನ್ನೂ ಕಂಡಿದ್ದ ಭಾರತ ತಂಡ, ದಕ್ಷಿಣ ಆಫ್ರಿಕಾವನ್ನು 83 ರನ್‌ಗೆ ಆಲೌಟ್ ಮಾಡಿತ್ತು. 243 ರನ್ ಅಂತರದ ಜಯ ದಾಖಲಿಸಿತ್ತು. ಅಂತಿಮವಾಗಿ ನೆದರ್ಲೆಂಡ್ಸ್ ತಂಡದ ವಿರುದ್ಧ 160 ರನ್‌ಗಳ ಅಂತರದ ಗೆಲುವು ಪಡೆದಿತ್ತು.