ಗಮನಾರ್ಹ ಪ್ರಗತಿ ಸಾಧಿಸಿದ ಇಸ್ರೋದ ಆದಿತ್ಯ- ಎಲ್ 1 ಮಿಷನ್!
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಪ್ರಪ್ರಥಮ ಸೂರ್ಯ ಯೋಜನೆ ಆದಿತ್ಯ-ಎಲ್1 ಮಿಷನ್ ಸೌರ ಸಂಶೋಧನೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದು, ಸೂರ್ಯ ಮತ್ತು ಭೂಮಿಯ ನಡುವಿನ ಲಾಂಗ್ರಿಗಿಯನ್ ಕೇಂದ್ರ 1ರ ಕಡೆ ಹೊರಟಿದೆ. ಆದಿತ್ಯ ಎಲ್1 ನೌಕೆಯಲ್ಲಿರುವ ಏಳು ಪೇಲೋಡ್ಗಳಲ್ಲಿ ಒಂದಾದ ದಿ ಹೈ ಎನರ್ಜಿ ಎಲ್1 ಆರ್ಬಿಟಿಂಗ್ ಎಕ್ಸ್ ರೇ ಸ್ಪೆಕ್ಟ್ರೋಮೀಟರ್ (ಎಚ್ಇಎಲ್1ಒಎಸ್) 2023ರ ಅಕ್ಟೋಬರ್ 29 ರಂದು ತನ್ನ ಮೊದಲ ವೀಕ್ಷಣಾ ಅವಧಿಯಲ್ಲಿ ಸೌರ ಜ್ವಾಲೆಗಳ ಹಠಾತ್ ಸ್ಫೋಟ ಹಂತವನ್ನು ಯಶಸ್ವಿಯಾಗಿ ದಾಖಲಿಸಿದೆ.
ಸೌರ ಜ್ವಾಲೆಯು ಸೂರ್ಯನ ಮೇಲ್ಮೈ ಮತ್ತು ಬಾಹ್ಯ ವಾತಾವರಣದಿಂದ ಪ್ರಾಥಮಿಕವಾಗಿ ಎಕ್ಸ್-ಕಿರಣಗಳು ಮತ್ತು ನೇರಳಾತೀತ (UV) ಬೆಳಕಿನ ರೂಪದಲ್ಲಿ ಉಂಟಾಗುವ ಶಕ್ತಿ ಮತ್ತು ವಿಕಿರಣದ ಹಠಾತ್ ಸ್ಫೋಟವಾಗಿದೆ.
ಆದಿತ್ಯ-ಎಲ್1 ಮಿಷನ್ ಅನ್ನು 2023ರ ಸೆ. 2ರಂದು ಪಿಎಸ್ಎಲ್ವಿ-ಸಿ57 ರಾಕೆಟ್ನಲ್ಲಿಟ್ಟು ಆಂಧ್ರದ ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಯಿತು. ಇದು ಭಾರತದ ಮೊದಲ ಸಮರ್ಪಿತ ಸೌರ ವೀಕ್ಷಣಾಲಯ ವರ್ಗದ ಮಿಷನ್ ಆಗಿದೆ. ಸೂರ್ಯನ ವಿವಿಧ ಅಂಶಗಳನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಿರುವ ಏಳು ವಿವಿಧ ಪೇಲೋಡ್ಗಳನ್ನು ನೌಕೆ ಹೊತ್ತೊಯ್ದಿದೆ.