ಹತ್ರಾಸ್ ಅತ್ಯಾಚಾರ ಸಂತ್ರಸ್ಥೆ ಮನಿಷಾ ಸಾವಿನ ನ್ಯಾಯಕ್ಕಾಗಿ ಉತ್ತರಪ್ರದೇಶ ಸರಕಾರದ ದುರಾಡಳಿತ ಖಂಡಿಸಿ ಉಪವಾಸ ಮತ್ತು ಧರಣಿ ಸತ್ಯಾಗ್ರಹ….

ಧಾರವಾಡ ಅ 12 : ಕರ್ನಾಟಕ ಮತ್ತು ಜನತಂತ್ರ ಪ್ರಯೋಗಶಾಲೆ ಸಂಘಟನೆಗಳಿಂದ ಇಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಅಂಬೇಡ್ಕರ್ ಪುತ್ಥಳಿ ಬಳಿ ಹತ್ರಾಸ್ ಅತ್ಯಾಚಾರ ಸಂತ್ರಸ್ಥೆ ಮನಿಷಾ ಸಾವಿನ ನ್ಯಾಯಕ್ಕಾಗಿ ಉತ್ತರಪ್ರದೇಶ ಸರಕಾರದ ದುರಾಡಳಿತ ಖಂಡಿಸಿ ಉಪವಾಸ ಮತ್ತು ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಯಿತು.
ನಗರದಲ್ಲಿ ಕೆಲ ಕಲಾವಿದರು ಪ್ರತಿಭಟನೆಯನ್ನು ಬೆಂಬಲಿಸಿ ಸ್ಥಳದಲ್ಲೆ ಚಿತ್ರ ಬಿಡಿಸಿದರು ಮತ್ತು ಹಿರಿಯ ಹೋರಾಟಗಾರ ಎಸ್ ಆರ್ ಹಿರೇಮಠ ಸೇರಿ ಹಲವರು ಉಪವಾಸ ಸತ್ಯಾಗ್ರಹ ಕೈಗೊಂಡರು.
ನಾಗರೀಕ ಸಮಾಜವೇ ತಲೆ ತಗ್ಗಿಸುವಂತ ಬರ್ಬರ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಹಾತ್ರಸ್ನಲ್ಲಿ ದಲಿತ ಯುವತಿ ಮನಿಷಾಳನ್ನು ನಾಲ್ಕು ಜನ ಕಾಮುಕರು ಅತ್ಯಾಚಾರ ಮಾಡಿ, ನಾಲಿಗೆ ಕತ್ತರಿಸಿ, ಬರ್ಬರವಾಗಿ ಕೊಂದು ಹಾಕಿದ್ದರು. ಆದರೆ, ಮನಿಷಾ ಸಾವಿಗೆ ನ್ಯಾಯ ದೊರಕಿಸಬೇಕಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರ, ಅತ್ಯಾಚಾರ ನಡೆಸಿದ ಕಾಮುಕರಿಗಿಂತ ಕ್ರೂರವಾಗಿ ವರ್ತಿಸಿದೆ. ಸಂವಿಧಾನ, ಪ್ರಜಾತಂತ್ರದ ಎಲ್ಲ ಮೌಲ್ಯಗಳನ್ನು ಧಿಕ್ಕರಿಸಿ ಅತ್ಯಾಚಾರಿಗಳ ಪರ ಸರಕಾರ, ಪೊಲೀಸ್ ವ್ಯವಸ್ಥೆ ನಿಂತಿರುವುದು ನಾಚಿಗೇಡಿನ ಸಂಗತಿಯಾಗಿದೆ.
ರಕ್ತ ಪಿಪಾಸುಗಳಾದ ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ದೇಶದ ಮಗಳು, ನಮ್ಮ ಸಹೋದರಿ ಮನಿಷಾ ಸಾವಿಗೆ ನ್ಯಾಯ ಕೇಳಲು ನೀವು ನಮ್ಮ ಜೊತೆಗೂಡಿ. ನ್ಯಾಯದ ಪರ ಹೋರಾಟಕ್ಕೆ ನೀವು ಕೂಡಾ ಧ್ವನಿ ಸೇರಿಸಿ, ಎಂಬುದು ಪ್ರಜ್ಞಾವಂತ ಮನಸ್ಸುಗಳಲ್ಲಿ ನಮ್ಮಯ ಭಿನ್ನಹ. ದಯವಿಟ್ಟು ಬನ್ನಿ, ಭಾಗವಹಿಸಿ, ನಮ್ಮ ನಾಗರೀಕ ಕರ್ತವ್ಯವನ್ನು ನಿರ್ವಹಿಸೋಣ ಎಂದು ಸಿಟಿಜನ್ಸ್ ಫಾರ್ ಡೆಮಾಕ್ರಸಿಯ ರಾಷ್ಠ್ರೀಯ ಅಧ್ಯಕ್ಷರಾದ ಎಸ್ ಆರ್ ಹಿರೇಮಠ ಮನವಿ ಮಾಡಿಕೊಂಡರು.
ದೀಪಾ ಮಂಜರಗಿ..