ಜಿಲ್ಲಾ

“ನೇಕಾರ ಪಾರ್ಕ್” ಸ್ಥಾಪಿಸಲು ಸರ್ಕಾರವನ್ನು ಒತ್ತಾಯಿಸುತ್ತೇನೆ : ಮಹಾದೇವಪ್ಪ ಯಾದವಾಡ..

ರಾಮದುರ್ಗ: ತಾಲೂಕಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೇಕಾರ ಸಮುದಾಯದ ಜನರಿದ್ದು ಇವರ ಒಳಿತಿಗಾಗಿ “ನೇಕಾರ ಪಾರ್ಕ್” ಸ್ಥಾಪಿಸಲು ಸರ್ಕಾರವನ್ನು ಒತ್ತಾಯಿಸುವುದಾಗಿ ಶಾಸಕ ಮಹಾದೇವಪ್ಪ ಯಾದವಾಡ ಇಂದಿಲ್ಲಿ ಹೇಳಿದರು.

ನಾರಾಯಣ ಪೇಟೆಯಲ್ಲಿ ಇಂದು ಬುಧವಾರ ಬಾಗಲಕೋಟೆಯ ನೇಕಾರರ ಪತ್ತಿನ ಸಹಕಾರ ಸಂಘ ನಿಯಮಿತ ಇದರ 12ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನೇಕಾರರ ಸಂಕಷ್ಟಕ್ಕೆ ಧ್ವನಿಯಾಗಿ ಸಾಕಷ್ಟು ಬಾರಿ ಸದನದ ಬಾವಿಗೆ ಇಳಿದು ಹೋರಾಟ ಮಾಡಿರುವುದಾಗಿ ತಿಳಿಸಿದರು.

ಕೊರೊನ ರೋಗದಿಂದ ತತ್ತರಿಸಿರುವ ನೇಕಾರರಿಗೆ ಸರ್ಕಾರ ಘೋಷಿಸಿದ ಪರಿಹಾರ ಮೊತ್ತವನ್ನು ಇಲಾಖೆಯು ಶೀಘ್ರ ನೇಕಾರರಿಗೆ ವಿತರಿಸುವಂತೆ ಸ್ಥಳದಲ್ಲಿದ್ದ ಜವಳಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಾನಿಧ್ಯ ವಹಿಸಿದ್ದ ಹಳೇ ಹುಬ್ಬಳ್ಳಿ ವೀರಬಿಕ್ಷಾವರ್ತಿ ನೀಲಕಂಠೇಶ್ವರ ಮಠದ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಅವರು, ಸರ್ಕಾರವು ರೈತ ಮತ್ತು ನೇಕಾರರಲ್ಲಿರುವ ತಾರತಮ್ಯ ನೀತಿಯನ್ನು ಕೈಬಿಡಬೇಕು. ರೈತರಂತೆ ನೇಕಾರರಿಗೂ ಉಚಿತ ವಿದ್ಯುತ್ ನೀಡಿ, ನೇಕಾರಿಕೆಯನ್ನು ಉತ್ತೇಜಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ ಅವರು, ನೇಕಾರರಿಗಾಗಿ ಇರುವ ವಿವಿಧ ನಿಗಮ ಮಂಡಳಿಗೆ ನೇಕಾರರನ್ನೆ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಹೇಳಿದರು.

ಸ್ಥಳೀಯ ಶ್ರೀಪತಿ ನಗರ ಸಿದ್ಧಾರೂಢ ಮಠದ ಶ್ರೀ ಜಗದಾತ್ಮಾನಂದ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು. ಕೇಂದ್ರ ಆಡಳಿತ ಮಂಡಳಿ ಅಧ್ಯಕ್ಷ ಸಂಗಪ್ಪ ಬಸರಿಕಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಪತ್ತಿನ ಸಹಕಾರ ಸಂಘ ಮಹಾ ಮಂಡಳದ ನಿರ್ದೇಶಕ ರವೀಂದ್ರ ಕಲಬುರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮೇಶ ಬಾಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಸ್. ಡವಣ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ವಾಸುದೇವ ದೊಡಮನಿ ಮಾತನಾಡಿದರು.

ತಾಲೂಕಿನ ಕಟಕೋಳ, ಸುರೇಬಾನ, ಹಲಗತ್ತಿ, ಮುದಕವಿ ಮತ್ತು ಮುನವಳ್ಳಿಯ ನೇಕಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನ್ಯಾಯವಾದಿ ಶ್ರೀನಿವಾಸ ಕುರುಡಗಿ ಸ್ವಾಗತಿಸಿದರು. ಶಿಕ್ಷಕ ಜಿ.ಎಂ. ಹುಲ್ಲೂರ ಮತ್ತು ತುಕಾರಾಮ ಕರದಿನ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಯಾದವಾಡ ವಂದಿಸಿದರು.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!