ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ

ನವದೆಹಲಿ- ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ಮೃತಪಟ್ಟಿದ್ದಾರೆ. ಕಳೆದ 20 ದಿನಗಳಿಂದ ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. 84 ವರ್ಷ ವಯಸ್ಸಿನ ಮುಖರ್ಜಿ ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಪ್ರಣಬ್ ಸಾವಿನ ಬಗ್ಗೆ ಪುತ್ರ ಅಭಿಜಿತ್ ಟ್ವಿಟ್ ಮಾಡಿದ್ದು, ಅತ್ಯಂತ ಭಾರವಾದ ಮನಸ್ಸಿನಿಂದ ವಿಷಯ ತಿಳಿಸುತ್ತೇನೆ. ವೈದ್ಯರ ಪ್ರಯತ್ನ, ಜನರ ಪ್ರಾರ್ಥನೆಗಳ ಹೊರತಾಗಿಯೂ ಪ್ರಣವ್ ಉಳಿಯಲಿಲ್ಲ ಎಂದು ಹೇಳಿದ್ದಾರೆ.
ಪ್ರಣಬ್ ಮುಖರ್ಜಿ ಪಶ್ಚಿಮ ಬಂಗಾಳದಲ್ಲಿ ಡಿಸೆಂಬರ್ 11, 1935ರಲ್ಲಿ ಜನಿಸಿದ್ದರು. ಮುಖರ್ಜಿ ಸುದೀರ್ಘ 50 ವರ್ಷಗಳ ಕಾಲ ರಾಜಕೀಯದಲ್ಲಿ ಇದ್ದರು. 1967ರಲ್ಲಿ ಕಾಂಗ್ರೆಸ್ ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಮುಖರ್ಜಿ ನಂತರ ಸತತವಾಗಿ ಆಯ್ಕೆಯಾಗಿದ್ದರು. ರಕ್ಷಣಾ, ವಿತ್ತ, ಸಾರಿಗೆ ಸಂಪರ್ಕ ಸೇರಿ ಹಲವು ಖಾತೆಗಳನ್ನು ಮುಖರ್ಜಿ ನಿಭಾಯಿಸಿದ್ದಾರೆ.
2012ರ ಜುಲೈ 25ರಿಂದ 2017ರ ಜುಲೈ 25ರ ವರೆಗೆ ಪ್ರಣಬ್ ಮುಖರ್ಜಿ ದೇಶದ ರಾಷ್ಟಪತಿಯಾಗಿ ಕೆಲಸ ಮಾಡಿದ್ದಾರೆ. 2019ರಲ್ಲಿ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನವನ್ನು ಮುಖರ್ಜಿಗೆ ನೀಡಲಾಗಿತ್ತು. ದೇಶದ ರಾಜಕೀಯದಲ್ಲಿ ಮುಖರ್ಜಿ ವಿಶೇಷ ಛಾಪನ್ನು ಮೂಡಿಸಿದ್ದರು. ಮೃತರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ ಇದ್ದಾರೆ.