ಬೆಂಗಳೂರಿನಲ್ಲಿಯೇ “ಎರ್ ಶೋ”

ನವದೆಹಲಿ: ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಎಂದು ಪರಿಗಣಿಸಲಾಗಿರುವ ‘ಏರೋ ಇಂಡಿಯಾ’ದ ಮುಂದಿನ ಆವೃತ್ತಿ ಬಗ್ಗೆ ರಕ್ಷಣಾ ಸಚಿವಾಲಯ ನಿರ್ಧಾರ ಕೈಗೊಂಡಿದೆ. ಮುಂದಿನ ವರ್ಷ ಫೆಬ್ರುವರಿ 3ರಿಂದ 5ರ ವರೆಗೂ ಬೆಂಗಳೂರಿನಲ್ಲಿಯೇ ಪ್ರದರ್ಶನ ಆಯೋಜನೆಯಾಗಲಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
ಏರೋ ಇಂಡಿಯಾ ವೈಮಾನಿಕ ಪ್ರದರ್ಶವನ್ನು 1996ರಿಂದಲೂ ಬೆಂಗಳೂರಿನಲ್ಲಿಯೇ ಆಯೋಜಿಸಲಾಗುತ್ತಿದೆ. 13ನೇ ಆವೃತ್ತಿಯ ಏರೋ ಇಂಡಿಯಾ 2021ರ ಫೆಬ್ರುವರಿ 3ರಿಂದ 5ರ ವರೆಗೂ ನಡೆಯಲಿದೆ.
ಪ್ರತಿ ಎರಡು ವರ್ಷಗಳಿಗೆ ಒಮ್ಮೆ ರಕ್ಷಣಾ ಸಚಿವಾಲಯ ವೈಮಾನಿಕ ಪ್ರದರ್ಶನ ಆಯೋಜಿಸುತ್ತಿದೆ. ಕೋವಿಡ್ ಪರಿಸ್ಥಿತಿಯ ನಡುವೆ ಜಾಗತಿಕ ಪ್ರಮುಖ ವೈಮಾನಿಕ ಸಂಸ್ಥೆಗಳು ಹಾಗೂ ಸ್ಥಳೀಯ ರಕ್ಷಣಾ ವಲಯದ ಕೈಗಾರಿಕೆಗಳಿಂದ ಮಾಹಿತಿ ಪಡೆದು ಈ ನಿರ್ಧಾರ ಕೈಗೊಳ್ಳಲಾಗಿದೆ.
ವೈಮಾನಿಕ ಪ್ರದರ್ಶನ ಆಯೋಜನೆಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಗಾಗಲೇ ಹಲವು ಬಾರಿ ಆಂತರಿಕ ಸಭೆಗಳನ್ನು ನಡೆಸಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕದ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.