ಕರ್ನಾಟಕಜಿಲ್ಲಾ

ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ 50 ಕ್ಕೂ ಅಧಿಕ ಗ್ರಾಮಗಳ ಶಾಶ್ವತ ಸ್ಥಳಾಂತರಕ್ಕೆ ಹಾಗೂ 2019 ರ ಪ್ರವಾಹದಲ್ಲಿ ಹಾನಿಗೊಳಗಾದ ವಿದ್ಯುತ್ ಮಗ್ಗಗಳಿಗೆ ತಲಾ 25 ಸಾವಿರ ಪರಿಹಾರಕ್ಕೆ ಮುಖ್ಯಮಂತ್ರಿಗಳಿಗೆ ಆಗ್ರಹ….

ಬೆಳಗಾವಿ: ಕಳೆದ ವರ್ಷದ ಕೃಷ್ಣೆ, ಘಟಪ್ರಭೆ
ಹಾಗೂ ಮಲಪ್ರಭೆ ನದಿಗಳ ಪ್ರವಾಹಕ್ಕೆ
ತುತ್ತಾದ ಜಿಲ್ಲೆಯ ಸುಮಾರು
ಐವತ್ತಕ್ಕೂ ಅಧಿಕ ಗ್ರಾಮಗಳನ್ನು ಮುಂದಿನ ಮಳೆಗಾಲದೊಳಗೆ ಶಾಶ್ವತವಾಗಿ
ಸ್ಥಳಾಂತರಿಸಲು ಹಾಗೂ ಹಾನಿಗೊಳಗಾದ ವಿದ್ಯುತ್ ಮಗ್ಗಗಳಿಗೆ ತಲಾ 25 ಸಾವಿರ ರೂ. ಪರಿಹಾರ ನೀಡಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಇಂದು ಮಂಗಳವಾರ ಬೆಳಗಾವಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸಿತು.

ಕಳೆದ ವರ್ಷದ ಪ್ರವಾಹದಲ್ಲಿ ಹಾನಿಗೊಳಗಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ ಜಿಲ್ಲೆಗಳ ಸುಮಾರು ಹತ್ತು ಸಾವಿರ ವಿದ್ಯುತ್ ಮಗ್ಗಗಳಿಗೆ ತಲಾ 25 ಸಾವಿರ ರೂ. ಪರಿಹಾರ ನೀಡಲು 2019 ರ ಅಕ್ಟೋಬರ್ 3 ರಂದು ಬೆಳಗಾವಿಯಲ್ಲಿ ಹಾಗೂ ಅ.4 ರಂದು ಬಾಗಲಕೋಟೆಯಲ್ಲಿ ನಡೆದ ಜನಪ್ರತಿನಿಧಿಗಳ, ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಅಕ್ಟೋಬರ್ 18 ರಂದು ಸರಕಾರ ಅಧಿಕೃತ ಆದೇಶ ಹೊರಡಿಸಿತ್ತು. ಆದರೆ ಅಕ್ಟೋಬರ್ 24 ರಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿದ್ದುಪಡಿ ಆದೇಶವೊಂದನ್ನು ಹೊರಡಿಸಿ ತಲಾ ಮಗ್ಗಕ್ಕೆ ಬದಲಾಗಿ ತಲಾ ಕುಟುಂಬಕ್ಕೆ ಎಂದು ತಿಳಿಸಿತು. ಎರಡು ಮಗ್ಗ ಹಾನಿಗೊಳಗಾದವರಿಗೂ 25 ಸಾವಿರ, 20 ಮಗ್ಗಗಳು ಹಾನಿಗೊಳಗಾದವರಿಗೂ 25 ಸಾವಿರ ರೂ. ಪರಿಹಾರ ನೀಡಲಾಯಿತು. ಇದು ಯಾವ ನ್ಯಾಯ? ಆದ್ದರಿಂದ ಮುಖ್ಯಮಂತ್ರಿಗಳ ಸಭೆಗಳಲ್ಲಿ ಕೈಕೊಂಡ ನಿರ್ಧಾರದಂತೆಯೇ ತಲಾ ಮಗ್ಗಕ್ಕೆ 25 ಸಾವಿರ ರೂ. ಪರಿಹಾರ ಕೊಡಬೇಕೆಂದು ಇಂದು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕಳೆದ ವರ್ಷ ಪ್ರವಾಹಕ್ಕೆ ಸಿಕ್ಕು ನೇಕಾರರು ನಷ್ಟಕ್ಕೊಳಗಾದರೆ ಈ ವರ್ಷ ಕೊರೋನಾ ಬಿಕ್ಕಟ್ಟಿನಿಂದಾಗಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ನೇಕಾರರು ಉತ್ಪಾದಿಸಿದ ಸುಮಾರು ಐವತ್ತು ಲಕ್ಷ ಸೀರೆಗಳನ್ನು ಸರಕಾರವೇ ಖರೀದಿಸುವ ಪ್ರಸ್ತಾವನೆಯು ಇನ್ನೂ ಅನುಷ್ಠಾನಗೊಂಡಿಲ್ಲವೆಂಬುದನ್ನು ಸಹ ಮುಖ್ಯಮಂತ್ರಿಗಳ ಗಮನಕ್ಕೆ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ತಂದರು.
ಮುಖ್ಯಮಂತ್ರಿಗಳನ್ನು ಭೆಟ್ಟಿಯಾದ ಕ್ರಿಯಾ ಸಮಿತಿಯ ನಿಯೋಗದಲ್ಲಿ ವಿರೇಂದ್ರ ಗೋಬರಿ, ಜೈನುಲ್ಲಾ ಜಮಾದಾರ, ರಾಕೇಶ ಸಂಗಣ್ಣವರ ಸೇರಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!