
ರಾಮದುರ್ಗ: ಮಲಪ್ರಭಾ ನದಿ ಪ್ರವಾಹದಿಂದ ಆದ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ಹಂಪಿಹೋಳಿ ಮತ್ತು ಅವರಾದಿ ಗ್ರಾಮದ ನೂರಾರು ಸಂತ್ರಸ್ತರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತ್ರತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮಹಿಳೆಯರು ಸೇರಿದಂತೆ ನೂರಾರು ಜನರು ಧರಣಿ ಸತ್ಯಾಗ್ರಹ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹ ಬಂದು ವರ್ಷ ಕಳೆದರೂ ಬಿದ್ದ ಮನೆಗಳಿಗೆ ಪರಿಹಾರ ದೊರೆತಿಲ್ಲ, ಕುಂಟು ನೆಪವೊಡ್ಡಿ ಕಾಲಹರಣ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಮಾಡಿದ್ದರಿಂದ ರೈತರಿಗೆ ಬಹಳ ನಷ್ಟ ಉಂಟಾಗಿದೆ ಎಂದು ದೂರಿದರು.
ನೆರೆ ಸಮೀಕ್ಷೆ ನಡೆಸಲು ಸಿಎಂ ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ನಡೆಸುವುದು ಬಿಟ್ಟು, ಸಂತ್ರಸ್ತರ ಕಷ್ಟ ನಷ್ಟಗಳನ್ನು ಸಮಕ್ಷಮ ಭೇಟಿ ಮಾಡಿ ಪರಿಹಾರ ದೊರಕಿಸಬೇಕು ಎಂದು ಧರಣಿ ನಿರತರು ತಮ್ಮ ಅಳಲು ತೋಡಿಕೊಂಡರು.
ತಾಲೂಕಿನ ಅವರಾದಿ ಫಲಹಾರೇಶ್ವರ ಮಠದ ಪೂ. ಶ್ರೀ ಶಿವಮೂರ್ತೇಶ್ವರ ಮಹಾಸ್ವಾಮಿಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ರಾತ್ರಿ ತಹಸೀಲ್ದಾರ್ ಕಚೇರಿಯಲ್ಲಿಯೇ ಸಂತ್ರಸ್ತರು ಅನ್ನ ಸಾರು ಸೇವಿಸಿದರು.
ಶಾಸಕ ಭೇಟಿ: ಸ್ಥಳಕ್ಕೆ ಶಾಸಕ ಮಹಾದೇವಪ್ಪ ಯಾದವಾಡ ಅವರು ಭೇಟಿ ನೀಡಿ ಮಾತನಾಡಿ, ಆಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಉಲ್ಬಣವಾಗಿದೆ ತಮಗೆ ಆದ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ಪಿಎಸ್ಐ ಆನಂದ ಡೋಣಿ ಅವರು ತಡರಾತ್ರಿಯಲ್ಲಿ ಧರಣಿ ನಿರತ ಸ್ಥಳದಲ್ಲಿ ಮುಕ್ಕಾಂ ಇದ್ದಾರೆ.