ನಟ ಸುಶಾಂತ್ ಸಿಂಗ ರಾಜಪೂತ್ ಸಾವು ಪ್ರಕರಣ ತನಿಖೆ ಸಿಬಿಐಗೆ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ..

ನವದೆಹಲಿ: – ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆ ಸಿಬಿಐಗೆ ಒಪ್ಪಿಸುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವರಿಗೆ ಜಯ ಸಿಕ್ಕಿದೆ. ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಸಾವಿನ ಪ್ರಕರಣದ ಸತ್ಯಾಸತ್ಯತೆ ಹೊರ ಬರಬೇಕಾದರೆ ಸಿಬಿಐ ತನಿಖೆ ಅತ್ಯವಶ್ಯಕ ಎಂದು ಹೋರಾಟ ಮಾಡಿದವರಿಗೆ ಗೆಲುವು ಸಿಕ್ಕಂತಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದ ಸುಶಾಂತ್ ಸಿಂಗ್ ಕುಟುಂಬದವರು ಹಾಗೂ ಕೋಟ್ಯಾಂತರ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಎರಡು ತಿಂಗಳಿನಿಂದ ಮುಂಬೈನ ಬಾಂದ್ರಾ ಪೊಲೀಸರು ತನಿಖೆ ನಡೆಸಿ ಸುಮಾರು 45ಕ್ಕೂ ಹೆಚ್ಚು ವ್ಯಕ್ತಿಗಳಿಂದ ಹೇಳಿಕೆಗಳನ್ನು ಸಂಗ್ರಹಿಸಿದ್ದರು.
ಸುಶಾಂತ್ ಮೃತಪಟ್ಟ ಸ್ಥಳ ಸೇರಿದಂತೆ ಅವರು ವಿವಿಧೆಡೆ ಸಂಗ್ರಹಿಸಿದ ಎಲ್ಲ ದಾಖಲೆಗಳನ್ನೂ ಸಿಬಿಐ ವಶಕ್ಕೆ ಒಪ್ಪಿಸುವಂತೆ ಸುಪ್ರೀಂಕೋರ್ಟ್ ಮುಂಬೈ ಪೊಲೀಸರಿಗೆ ಸೂಚಿಸಿದೆ.
ಇನ್ನೂ ಹೈ ಪ್ರೊಫೈಲ್ ಕೇಸ್ ವಿಚಾರವಾಗಿ ಬಿಹಾರ ಹಾಗೂ ಮುಂಬೈ ಪೊಲೀಸರ ನಡುವಿನ ತನಿಖಾ ವ್ಯಾಪ್ತಿಯ ಬಗ್ಗೆ ಕಿತ್ತಾಟ ನಡೆದಿತ್ತು. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮುಂಬೈ ಪೊಲೀಸರು ಐಪಿಸಿ ಸೆಕ್ಷನ್ 174ರ ಅಡಿಯಲ್ಲಿ ಆಕಸ್ಮಿಕ ಮರಣದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ ಇದರಿಂದ ತನಿಖೆ ಮಾಡುವ ಅಧಿಕಾರ ನಿಯಮಿತವಾಗಿತ್ತು ಎಂದು ಅಭಿಪ್ರಾಯಪಟ್ಟಿದೆ. ಈಗ ಬಿಹಾರ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಕಾನೂನು ಬದ್ಧವಾಗಿದೆ ಎಂದು ನ್ಯಾಯಪೀಠ ಹೇಳಿದೆ. ಸುಶಾಂತ್ ತಂದೆ ಕೆ ಕೆ ಸಿಂಗ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಬಿಹಾರ ಪೊಲೀಸರು ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಇವುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ರಿಯಾ, ಬಿಹಾರದಲ್ಲಿ ದಾಖಲಾದ ಪ್ರಕರಣವನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿದ್ದರು. ಆದ್ರೆ ಸುಪ್ರೀಂ ಕೋರ್ಟ್ ರಿಯಾ ಮನವಿ ತಿರಸ್ಕರಿಸಿದ್ದು ಎಫ್ಐಆರ್ ದಾಖಲಿಸಿರುವುದು ನ್ಯಾಯಬದ್ಧವಾಗಿದೆ ಎಂದು ಹೇಳಿದೆ. ಸಿಬಿಐ ತನಿಖೆ ಅವಶ್ಯಕತೆ ಇಲ್ಲ ಎಂದು ಹೇಳುತ್ತಿದ್ದ ಮುಂಬೈ ಪೊಲೀಸರು ಹಾಗೂ ಬಿಹಾರದಿಂದ ಮುಂಬೈಗೆ ಎಫ್ಐಆರ್ ವರ್ಗಾವಣೆಗೆ ಕೋರಿದ್ದ ರಿಯಾ ಚಕ್ರವರ್ತಿಗೆ ಸುಪ್ರೀಂ ಕೋರ್ಟ್ ಆದೇಶದಿಂದ ಹಿನ್ನಡೆಯಾಗಿದೆ..